×
Ad

ಸೆ.13ರಂದು ಮಿಜೋರಾಂ, ತ್ರಿಪುರಾಕ್ಕೆ ಮೋದಿ ಭೇಟಿ ಸಾಧ್ಯತೆ

Update: 2025-09-02 20:36 IST

 ನರೇಂದ್ರ ಮೋದಿ | PC :  PTI 

ಹೊಸದಿಲ್ಲಿ,ಸೆ.2: ಪ್ರಧಾನಿ ನರೇಂದ್ರ ಮೋದಿ ಅವರು ಮಿಜೋರಾಂ ಹಾಗೂ ತ್ರಿಪುರಾ ರಾಜ್ಯಗಳಿಗೆ ಸೆಪ್ಟೆಂಬರ್ 13ರಂದು ಭೇಟಿ ನೀಡಲಿದ್ದಾರೆಂದು ಐಜ್ವಾಲ್‌ ನಲ್ಲಿರುವ ಕೇಂದ್ರ ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವೇಳೆ ಪ್ರಧಾನಿಯವರ ಮಣಿಪುರ ಪ್ರವಾಸ ದೃಢಪಟ್ಟಲ್ಲಿ, ಎರಡು ವರ್ಷಗಳ ಹಿಂದೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ಅವರು ಈಶಾನ್ಯ ಭಾರತದ ಈ ರಾಜ್ಯಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಲಿದೆ.

ಪ್ರಧಾನಿಯವರು ಮಣಿಪುರ ಪ್ರವಾಸವನ್ನು ಕೈಗೊಳ್ಳಲಿದ್ದಾರೆಂದು ತಮಗೆ ಕೇಂದ್ರ ಸರಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆಂದು ನೆರೆಯ ರಾಜ್ಯವಾದ ಮಿಜೋರಾಂ ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.ಆದಾಗ್ಯೂ ಪ್ರಧಾನಿಯವರ ಈಶಾನ್ಯ ಭಾರತ ಪ್ರವಾಸದ ಅಂತಿಮ ವೇಳಾಪಟ್ಟಿ ಇನ್ನಷ್ಟೇ ಬರಬೇಕಿದೆಯೆಂದು ಅವರು ತಿಳಿಸಿದ್ದಾರೆ. ಆದರೆ ಮಣಿಪುರದಲ್ಲಿರುವ ಕೇಂದ್ರ ಸರಕಾರದ ಅಧಿಕಾರಿಗಳು ರಾಜ್ಯಕ್ಕೆ ಪ್ರಧಾನಿಯವರ ಭೇಟಿಯನ್ನು ಈವರೆಗೆ ದೃಢಪಡಿಸಿಲ್ಲ.

2025ರ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ರಾಜೀನಾಮೆ ಆನಂತರ ಮಣಿಪುರದಲ್ಲಿ ರಾಷ್ಟ್ರಪತಿಯವರ ಆಳ್ವಿಕೆಯನ್ನು ಹೇರಲಾಗಿದೆ. ಮಣಿಪುರದ ಕುಕಿ ಹಾಗೂ ಮೈತೇಯಿ ಪಂಗಡಗಳ ನಡುವೆ ಭುಗಿಲೆದ್ದ ಸಂಘರ್ಷದಲ್ಲಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ, ಹಲವಾರು ಮಂದಿ ಸಾವನ್ನಪ್ಪಿದ್ದಾರೆ.

ಈ ಮಧ್ಯೆ ಮಿಜೋರಾಂಗೆ ಪ್ರಧಾನಿಯವರ ಯೋಜಿತ ಭೇಟಿಯ ಹಿನ್ನೆಲೆಯಲ್ಲಿ ಪೂರ್ವಸಿದ್ಧತೆಗಳ ಪರಾಮರ್ಶೆಗಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿ ಖಿಲ್ಲಿ ರಾಮ್ ಮೀನಾ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳು ಹಾಗೂ ಕಾನೂನು ಅನುಷ್ಠಾನ ಏಜೆನ್ಸಿಗಳ ಸಭೆ ಶನಿವಾರ ನಡೆದಿತ್ತು. ಭದ್ರತಾ ಏರ್ಪಾಡುಗಳು, ಸಾರಿಗೆ ನಿರ್ವಹಣೆ ಹಾಗೂ ಸ್ವಾಗತ ಶಿಷ್ಟಾಚಾರಗಳು ಹಾಗೂ ಬೀದಿಗಳನ್ನು ಶೃಂಗರಿಸುವ ಬಗ್ಗೆ ಚರ್ಚಿಸಲಾಯಿತು.

ಪ್ರಧಾನಿ ನರೇಂದ್ರ ಮೋದಿಯವರ ಮಿಜೋರಾಂ ಭೇಟಿಯ ಸಂದರ್ಭ ಹೊಸತಾಗಿ ನಿರ್ಮಿಸಲಾದ ಕಾರ್ಯಾಲಯ ಕಟ್ಟಡ ಮತ್ತಿತರ ಹಲವಾರು ಪೂರ್ಣಗೊಂಡ ಯೋಜನೆಗಳನ್ನು ಉದ್ಘಾಟಿಸುವ ನಿರೀಕ್ಷೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News