ಮೋದಿ-ಶಾ ಜೋಡಿಯು ಚುನಾವಣಾ ಆಯೋಗದ ಸ್ವಾತಂತ್ರ್ಯಕ್ಕೆ ಧಕ್ಕೆಯನ್ನುಂಟು ಮಾಡಿದೆ: ಕಾಂಗ್ರೆಸ್
ಅಮಿತ್ ಶಾ , ನರೇಂದ್ರ ಮೋದಿ | PTI
ಹೊಸದಿಲ್ಲಿ: ಶನಿವಾರ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿರುವ ಕಾಂಗ್ರೆಸ್, ರಾಷ್ಟ್ರೀಯ ಮತದಾರರ ದಿನದಂದು ಅದು ಸ್ವಯಂ ಅಭಿನಂದನೆಯನ್ನು ಅರ್ಪಿಸಿಕೊಂಡಿರುವುದು ಸಂವಿಧಾನದ ಅಪಹಾಸ್ಯವಾಗಿದೆ ಮತ್ತು ಮತದಾರರಿಗೆ ಮಾಡಿರುವ ಅವಮಾನವಾಗಿದೆ ಎಂದು ಕಿಡಿಕಾರಿದೆ.
ಕಳೆದೊಂದು ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರ ಜೋಡಿಯು ಚುನಾವಣಾ ಆಯೋಗದ ವೃತ್ತಿಪರತೆ ಮತ್ತು ಸ್ವಾತಂತ್ರ್ಯಕ್ಕೆ ಗಂಭೀರ ಧಕ್ಕೆಯನ್ನುಂಟು ಮಾಡಿದೆ ಎಂದೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ ರಮೇಶ್ ಅವರು ಎಕ್ಸ್ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.
ಭಾರತವು ಗಣರಾಜ್ಯವಾಗುವ ಒಂದು ದಿನ ಮೊದಲು,1950ರ ಜ.25ರಂದು ಚುನಾವಣಾ ಆಯೋಗವು ಸ್ಥಾಪನೆಗೊಂಡಿದ್ದು, ಕಳೆದ 15 ವರ್ಷಗಳಿಂದ ಜ.25ನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ.
‘ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ನಮ್ಮ ಚುನಾವಣಾ ಪ್ರಜಾಪ್ರಭುತ್ವದ ಬುನಾದಿಯನ್ನು ಸ್ಥಾಪಿಸುವಲ್ಲಿ ಅದರ ಮೊದಲ ಅಧ್ಯಕ್ಷ ಸುಕುಮಾರ ಸೇನ್ ಅವರ ಪಾತ್ರವು ನಿರ್ಣಾಯಕವಾಗಿತ್ತು. ಅವರು ಎಂಟು ವರ್ಷಗಳ ಕಾಲ ಏಕೈಕ ಮುಖ್ಯ ಚುನಾವಣಾ ಆಯುಕ್ತರಾಗಿದ್ದರು. ಇತರ ಪ್ರತಿಷ್ಠಿತ ಮುಖ್ಯ ಚುನಾವಣಾ ಆಯುಕ್ತರೂ ಆಗಿ ಹೋಗಿದ್ದಾರೆ, ಅವರ ಪೈಕಿ ಟಿ.ಎನ್.ಶೇಷನ್ ಅವರು ಬಹಳ ಎತ್ತರದಲ್ಲಿ ನಿಲ್ಲುತ್ತಾರೆ ಮತ್ತು ಚುನಾವಣಾ ಪ್ರಜಾಪ್ರಭುತ್ವಕ್ಕೆ ಅವರ ಕೊಡುಗೆಗಳು ಅತ್ಯಮೂಲ್ಯವಾಗಿವೆ’ ಎಂದು ಹೇಳಿರುವ ರಮೇಶ್, ವಿಷಾದವೆಂದರೆ ಕಳೆದೊಂದು ದಶಕದಲ್ಲಿ ಮೋದಿ-ಶಾ ಜೋಡಿಯು ಚುನಾವಣಾ ಆಯೋಗದ ವೃತ್ತಿಪರತೆ ಮತ್ತು ಸ್ವಾತಂತ್ರ್ಯಕ್ಕೆ ಗಂಭೀರ ಧಕ್ಕೆಯನ್ನುಂಟು ಮಾಡಿದೆ ಎಂದು ಆರೋಪಿಸಿದ್ದಾರೆ.
ಆಯೋಗದ ಕೆಲವು ನಿರ್ಧಾರಗಳು ಈಗ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಟ್ಟಿವೆ. ಹರ್ಯಾಣ ಮತ್ತು ಮಹಾರಾಷ್ಟ್ರದಲ್ಲಿಯ ಇತ್ತೀಚಿನ ವಿಧಾನಸಭಾ ಚುನಾವಣೆಗಳ ಕುರಿತು ಎತ್ತಲಾಗಿದ್ದ ಕಳವಳಗಳ ಬಗ್ಗೆ ಅದರ ನಿಲುವು ಆಘಾತಕಾರಿಯಾಗಿ ಪಕ್ಷಪಾತದಿಂದ ಕೂಡಿದೆ ಎಂದು ರಮೇಶ್ ಹೇಳಿದ್ದಾರೆ.