×
Ad

ಕೇವಲ ಸಲಹೆ ನೀಡುತ್ತೇವೆಯೇ ಹೊರತು, ಬಿಜೆಪಿ ಅಧ್ಯಕ್ಷರ ಆಯ್ಕೆಯಲ್ಲಿ ಯಾವುದೇ ಪಾತ್ರವಿಲ್ಲ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

Update: 2025-08-28 20:15 IST

 ಮೋಹನ್ ಭಾಗವತ್ | PC: PTI 

ಹೊಸದಿಲ್ಲಿ: “ನಾವು ಬಿಜೆಪಿಗೆ ಕೇವಲ ಸಲಹೆ ನೀಡುತ್ತೇವೆಯೇ ಹೊರತು, ಅದರ ಅಧ್ಯಕ್ಷರ ಆಯ್ಕೆಯಲ್ಲಿ ಯಾವುದೇ ಪಾತ್ರ ವಹಿಸುವುದಿಲ್ಲ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಅಧ್ಯಕ್ಷರ ನೇಮಕ, ಕೇಂದ್ರ ಸರಕಾರ ಮಂಡಿಸಿರುವ ಸಿಎಂ, ಪಿಎಂ ಕ್ರಿಮಿನಲ್ ಆರೋಪ ಮಸೂದೆ ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರೂ ಆದ ಮೋಹನ್ ಭಾಗವತ್, “ನಮಗೆ ಎಲ್ಲ ಸರಕಾರಗಳೊಂದಿಗೂ ಉತ್ತಮ ಸಮನ್ವಯವಿದೆ, ಕೇವಲ ಹಾಲಿ ಸರಕಾರದೊಂದಿಗೆ ಮಾತ್ರವಲ್ಲ” ಎಂದೂ ಹೇಳಿದ್ದಾರೆ.

“ಎಲ್ಲಿಯೂ ಯಾವುದೇ ಕಲಹವಿಲ್ಲದಿದ್ದರೂ, ಎಲ್ಲ ವಿಷಯಗಳಲ್ಲೂ ಒಂದೇ ಅಭಿಪ್ರಾಯ ಹೊಂದಿರಲು ಸಾಧ್ಯದವಿಲ್ಲ. ನಾವು ಯಾವಾಗಲೂ ಪರಸ್ಪರರನ್ನು ನಂಬುತ್ತೇವೆ” ಎಂದು ಬಿಜೆಪಿ ಕುರಿತು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ನಾನು ಶಾಖೆಗಳನ್ನು ನಡೆಸುವುದರಲ್ಲಿ ನಿಪುಣ. ಬಿಜೆಪಿಯು ಸರಕಾರ ನಡೆಸುವುದರಲ್ಲಿ ನಿಪುಣ. ನಾವು ಪರಸ್ಪರ ಸಲಹೆಗಳನ್ನು ಮಾತ್ರ ನೀಡಲು ಸಾಧ್ಯ. ನಾವು ಬಿಜೆಪಿಯ ಅಧ್ಯಕ್ಷರನ್ನು ಆಯ್ಕೆ ಮಾಡಿ, ನಾವೇನಾದರೂ ಬಿಜೆಪಿಯ ಅಧ್ಯಕ್ಷರನ್ನು ನಿರ್ಧರಿಸುವಂತಿದ್ದರೆ, ಇಷ್ಟು ದೀರ್ಘ ಸಮಯ ಹಿಡಿಯುತ್ತಿರಲಿಲ್ಲ” ಎಂದು ಬಿಜೆಪಿಯ ಅಧ್ಯಕ್ಷರ ಆಯ್ಕೆಯಲ್ಲಿ ಆರೆಸ್ಸೆಸ್ ಪಾತ್ರವೇನಾದರೂ ಇದೆಯೆ ಎಂಬ ಪ್ರಶ್ನೆದಗೆ ಅವರು ಉತ್ತರಿಸಿದ್ದಾರೆ.

ಪಿಎಂ, ಸಿಎಂ ಕ್ರಿಮಿನಲ್ ಆರೋಪ ಮಸೂದೆ ಸೇರಿದಂತೆ ಹೊಸದಾಗಿ ಮಂಡಿಸಲಾಗಿರುವ ಹಲವು ಮಸೂದೆಗಳ ಕುರಿತು ನಿರ್ಧಾರ ಕೈಗೊಳ್ಳಲು ಸಂಸತ್ ಮಾತ್ರ ಸೂಕ್ತ ವೇದಿಕೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಪಕ್ಷದ ಅಧ್ಯಕಕ್ಷರನ್ನು ಆಯ್ಕೆ ಮಾಡಲು ಬಿಜೆಪಿ ತನ್ನದೇ ಆದ ಸಮಯ ತೆಗೆದುಕೊಳ್ಳದಲಿದೆ ಎಂದು ಅವರು ಲಘು ಧಾಟಿಯಲ್ಲಿ ಹೇಳಿದ್ದಾರೆ.

ಆರೆಸ್ಸೆಸ್ ಬಿಜೆಪಿಗೆ ನೆರವು ನೀಡುತ್ತಿದೆಯೆ ಹೊರತು, ಇತರ ಪಕ್ಷಗಳಿಗಲ್ಲ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಮೋಹನ್ ಭಾಗವತ್, “ನಾವು ಒಳ್ಳೆಯ ಕೆಲಸ ಮಾಡಲು ಎಲ್ಲರಿಗೂ ಸಹಾಯ ಮಾಡುತ್ತೇವೆಯೇ ಹೊರತು ಬಿಜೆಪಿಗೆ ಮಾತ್ರವಲ್ಲ” ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News