ಹಿಂದು ಧರ್ಮವೂ ನೋಂದಣಿಯಾಗಿಲ್ಲ: ಆರೆಸ್ಸೆಸ್ ಕುರಿತು ಟೀಕೆಗೆ ಭಾಗವತ್ ಪ್ರತಿಕ್ರಿಯೆ
ಮೋಹನ ಭಾಗವತ | Photo Credit : PTI
ಬೆಂಗಳೂರು,ನ.9: ಆರೆಸ್ಸೆಸ್ ಅನ್ನು ಏಕೆ ಔಪಚಾರಿಕವಾಗಿ ನೋಂದಣಿ ಮಾಡಿಸಿಲ್ಲ ಎಂಬ ಕುರಿತು ಪ್ರಸಕ್ತ ನಡೆಯುತ್ತಿರುವ ಚರ್ಚೆಗಳಿಗೆ ರವಿವಾರ ಇಲ್ಲಿ ಪ್ರತಿಕ್ರಿಯಿಸಿದ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಹಲವಾರು ವಿಷಯಗಳನ್ನು ನೋಂದಾಯಿಸಲಾಗಿಲ್ಲ, ಹಿಂದು ಧರ್ಮವು ಸಹ ನೋಂದಣಿಯಾಗಿಲ್ಲ ಎಂದು ಹೇಳಿದರು.
ಈ ಹಿಂದೆ ಆರೆಸ್ಸೆಸ್ ಅನ್ನು ಮೂರು ಬಾರಿ ನಿಷೇಧಿಸಿದ್ದನ್ನು ಉಲ್ಲೇಖಿಸಿದ ಅವರು, ‘ಹೀಗಾಗಿ ಸರಕಾರವು ನಮ್ಮನ್ನು ಗುರುತಿಸಿದೆ. ನಾವು ಇಲ್ಲದಿದ್ದರೆ ಯಾರನ್ನು ಅವರು ನಿಷೇಧಿಸುತ್ತಿದ್ದರು?’ಎಂದು ಪ್ರಶ್ನಿಸಿದರು.
ಇಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಕಾರ್ಯಕ್ರಮವೊಂದರಲ್ಲಿ ಆಯ್ದ ಪ್ರಶ್ನೆಗಳಿಗೆ ಭಾಗವತ್ ಉತ್ತರಿಸುತ್ತಿದ್ದರು.
ಆರೆಸ್ಸೆಸ್ ನ ನೂರು ವರ್ಷಗಳ ಇತಿಹಾಸವನ್ನು ಉಲ್ಲೇಖಿಸಿದ ಅವರು,‘ಆರೆಸ್ಸೆಸ್ 1925ರಲ್ಲಿ ಸ್ಥಾಪನೆಯಾಗಿದ್ದರಿಂದ ನಾವು ಬ್ರಿಟಿಷ್ ಸರಕಾರದೊಂದಿಗೆ ನೋಂದಾಯಿಸಿಕೊಳ್ಳಬೇಕಿತ್ತೇ? 1947ರಲ್ಲಿ ಸ್ವಾತಂತ್ರ್ಯ ಲಭಿಸಿದ ಬಳಿಕ ಸರಕಾರವು ನೋಂದಣಿಯನ್ನು ಕಡ್ಡಾಯಗೊಳಿಸಿರಲಿಲ್ಲ’ ಎಂದು ಹೇಳಿದರು.
ಆರೆಸ್ಸೆಸ್ ನ ತೆರಿಗೆ ಸ್ಥಾನಮಾನದ ಕುರಿತೂ ಮಾತನಾಡಿದ ಭಾಗವತ್,ಆದಾಯ ತೆರಿಗೆ ಇಲಾಖೆ ಮತ್ತು ನ್ಯಾಯಾಲಯಗಳು ಆರೆಸ್ಸೆಸ್‌ನ್ನು ‘ವ್ಯಕ್ತಿಗಳ ಸಮೂಹ’ ಎಂದು ಪರಿಗಣಿಸಿವೆ ಮತ್ತು ಅದಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಎಂದರು.
ಆರೆಸ್ಸೆಸ್ ಹಿಂದು ಸಮಾಜವನ್ನು ಸಂಘಟಿಸುವ ಗುರಿಯನ್ನು ಹೊಂದಿದೆ,ಅಧಿಕಾರಕ್ಕಾಗಿ ಅಲ್ಲ. ಆದರೆ ದೇಶದ ವೈಭವಕ್ಕಾಗಿ ಎಂದು ಶನಿವಾರ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್ ಹೇಳಿದ್ದರು.
ಹಿಂದುಗಳು ಭಾರತಕ್ಕೆ ‘ಜವಾಬ್ದಾರ’ ರಾಗಿದ್ದಾರೆ ಎಂದು ಪ್ರತಿಪಾದಿಸಿದ ಅವರು,ಎಲ್ಲ ಭಾರತೀಯರು ಹಿಂದುಗಳು ಎಂಬ ಆರೆಸ್ಸೆಸ್ ನ ವ್ಯಾಖ್ಯಾನವನ್ನು ಪುನರುಚ್ಚರಿಸಿದರು. ಭಾರತದಲ್ಲಿ ಯಾರೂ ‘ಅಹಿಂದುಗಳು’ ಇಲ್ಲ, ಏಕೆಂದರೆ ಮುಸ್ಲಿಮರು ಮತ್ತು ಕ್ರೈಸ್ತರು ಸೇರಿದಂತೆ ಈ ದೇಶದಲ್ಲಿಯ ಪ್ರತಿಯೊಬ್ಬರೂ ಒಂದೇ ಪೂರ್ವಜರ ವಂಶದವರಾಗಿದ್ದಾರೆ ಮತ್ತು ‘ಹಿಂದು ದೇಶದ ಮೂಲಸಂಸ್ಕೃತಿಯಾಗಿದೆ’ ಎಂದು ವಾದಿಸಿದರು.
ಆರೆಸ್ಸೆಸ್ ಏನನ್ನು ಸಾಧಿಸಲು ಉದ್ದೇಶಿಸಿದೆ ಎನ್ನುವುದರ ಕುರಿತಂತೆ ಅವರು,‘ಸಂಘಟಿತ ಶಕ್ತಿಯೊಂದು ಸಂಘದ (ಆರೆಸ್ಸೆಸ್) ರೂಪದಲ್ಲಿ ಬೆಳೆದಾಗ ಅದು ಅಧಿಕಾರವನ್ನು ಬಯಸುವುದಿಲ್ಲ. ಅದಕ್ಕೆ ಸಮಾಜದಲ್ಲಿ ಪ್ರಾಮುಖ್ಯ ಬೇಕಿಲ್ಲ. ಅದು ಕೇವಲ ಭಾರತಮಾತೆಯ ವೈಭವಕ್ಕಾಗಿ ಸೇವೆಯನ್ನು ಸಲ್ಲಿಸಲು, ಸಮಾಜವನ್ನು ಸಂಘಟಿಸಲು ಬಯಸುತ್ತದೆ. ಅದು ಹೇಗೋ,ನಮ್ಮ ದೇಶದಲ್ಲಿ ಜನರಿಗೆ ಇದನ್ನು ನಂಬಲು ಕಷ್ಟವಾಗಿತ್ತು. ಆದರೆ ಈಗ ಅವರು ನಂಬುತ್ತಿದ್ದಾರೆ’ ಎಂದು ಹೇಳಿದರು.
ಸನಾತನ ಧರ್ಮವೇ ಹಿಂದು ರಾಷ್ಟ್ರ ಮತ್ತು ಸನಾತನ ಧರ್ಮದ ಉತ್ಥಾನವೇ ಭಾರತದ ಉತ್ಥಾನ ಎಂದೂ ಅವರು ಹೇಳಿದರು.
ಆರೆಸ್ಸೆಸ್ ನ ಹಾದಿ ಸುಲಭದ್ದಾಗಿರಲಿಲ್ಲ ಎಂದು ಹೇಳಿದ ಭಾಗವತ್,‘ಹಿಂದೆ ಸರಕಾರಗಳು ಅದನ್ನು ನಿಷೇಧಿಸಿದ್ದನ್ನು ಉಲ್ಲೇಖಿಸಿದರು. ಎರಡು ನಿಷೇಧಗಳಿದ್ದವು. ಮೂರನೇಯದೂ ಇತ್ತು,ಆದರೆ ಅದು ಅಷ್ಟೇನೂ ದೊಡ್ಡದಾಗಿರಲಿಲ್ಲ. ವಿರೋಧ,ಟೀಕೆಗಳು ಇದ್ದವು. ಸ್ವಯಂಸೇವಕರನ್ನು ಹತ್ಯೆ ಮಾಡಲಾಗಿತ್ತು. ನಾವು ಅಭಿವೃದ್ಧಿ ಹೊಂದಬಾರದು ಎಂದು ಎಲ್ಲ ರೀತಿಗಳಲ್ಲಿ ಪ್ರಯತ್ನಿಸಲಾಗಿತ್ತು. ಆದರೆ ಸ್ವಯಂಸೇವಕರು ತಮ್ಮ ಎಲ್ಲವನ್ನೂ ಸಂಘಕ್ಕೆ ನೀಡುತ್ತಾರೆ ಮತ್ತು ಪ್ರತಿಯಾಗಿ ಏನನ್ನೂ ಬಯಸುವುದಿಲ್ಲ’ ಎಂದರು.
ಆರೆಸ್ಸೆಸ್ ಪ್ರತಿಗಾಮಿ ಸಂಸ್ಥೆಯಲ್ಲ ಎಂದು ಒತ್ತಿ ಹೇಳಿದ ಅವರು, ‘ಅದು ಯಾವುದಕ್ಕೂ ವಿರುದ್ಧವಾಗಿಲ್ಲ. ಅದು ಸಮಾಜದ ಸಂಘಟನೆಯಾಗಿದೆ, ಸಮಾಜದಲ್ಲಿ ಅಲ್ಲ. ಹಲವಾರು ಧರ್ಮಗಳನ್ನು ಅನುಸರಿಸುತ್ತಿರುವ ಎಲ್ಲ 142 ಕೋಟಿ ಜನರನ್ನು ಒಳಗೊಂಡಿರುವ ಹಿಂದು ಸಮಾಜವನ್ನು ಸಂಘಟಿಸಲು ನಾವು ಬಯಸಿದ್ದೇವೆ. ಅವರಲ್ಲಿ ಕೆಲವರು ಇತಿಹಾಸದ ಅವಧಿಯಲ್ಲಿ ಹೊರಗಿನಿಂದ ಬಂದವರಾಗಿದ್ದಾರೆ. ತಮ್ಮನ್ನು ಹಿಂದುಗಳು ಎಂದು ಪರಿಗಣಿಸದವರೊಂದಿಗೆ ಆರೆಸ್ಸೆಸ್ ಮಾತುಕತೆಯನ್ನು ಆರಂಭಿಸಿದೆ’ ಎಂದು ಹೇಳಿದರು.