ಭಾರತದಿಂದ ಮುಂಗಾರು ನಿರ್ಗಮನ
ಸಾಂದರ್ಭಿಕ ಚಿತ್ರ | Photo Credi : PTI
ಹೊಸದಿಲ್ಲಿ,ಅ.16: ಭಾರತೀಯ ರೈತರ ಜೀವನಾಡಿಯಾದ ನೈಋತ್ಯ ಮುಂಗಾರು ಗುರುವಾರ ಇಡೀ ದೇಶದಿಂದ ನಿರ್ಗಮಿಸಿದೆಯೆಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇದೇ ವೇಳೆ ಆಗ್ನೇಯ ಮುಂಗಾರು ತಮಿಳುನಾಡು, ಪುದುಚೇರಿ ಹಾಗೂ ಕಾರೈಕಲ್, ಆಂಧ್ರಪ್ರದೇಶದ ಕರಾವಳಿ, ರಾಯಲಸೀಮಾ, ದಕ್ಷಿಣ ಕರ್ನಾಟಕದ ಒಳನಾಡು ಹಾಗೂ ಕೇರಳ-ಮಾಹೆಯನ್ನು ಪ್ರವೇಶಿಸಿದೆಯೆಂದು ಅದು ಹೇಳಿದೆ.
ವಾಡಿಕೆಯಂತೆ ನೈಋತ್ಯ ಮುಂಗಾರು ಅಕ್ಟೋಬರ್ 15ರಂದು ನಿರ್ಗಮಿಸುತ್ತದೆ. ಆದರೆ ಈ ಸಲ ಒಂದು ದಿನ ವಿಳಂಬವಾಗಿ ಅದು ದೇಶದಿಂದ ನಿರ್ಗಮಿಸಿದೆ ಎಂದು ಐಎಂಡಿ ಹೇಳಿಕೆ ತಿಳಿಸಿದೆ.
ಈ ವರ್ಷ ನೈಋತ್ಯ ಮುಂಗಾರು ಮೇ 24ರಂದು ಕೇರಳವನ್ನು ಪ್ರವೇಶಿಸಿದ್ದು, ಇದು 2009ರಿಂದೀಚೆಗೆ ಭಾರತದ ಮುಖ್ಯಭೂಮಿಯನ್ನು ಅತ್ಯಂತ ಮುಂಚಿತವಾಗಿ ತಲುಪಿದ್ದು ಇದೇ ಮೊದಲಾಗಿದೆ. 2009ರಲ್ಲಿ ನೈಋತ್ಯ ಮುಂಗಾರು ಮೇ 23ರಂದು ಭಾರತದ ಮುಖ್ಯಭೂಮಿಯನ್ನು ಪ್ರವೇಶಿಸಿತ್ತು.
ಈ ಸಲದ ನೈಋತ್ಯ ಮುಂಗಾರಿನಲ್ಲಿ ಭಾರತವು 937.2 ಮಿ.ಮೀ. ಮಳೆಯಾಗಿದೆ ಇಂದು ವಾಡಿಕೆ (868.6 ಮಿ.ಮೀ)ಗಿಂತ ಅಧಿಕವಾಗಿದೆ.
ಮುಂಗಾರೋತ್ತರ ಋತುವಿನಲ್ಲಿ ಅಂದರೆ ಅಕ್ಟೋಬರ್‌ನಿಂದ ಡಿಸೆಂಬರ್ ವರೆಗೆ ವಯುವ್ಯಭಾರತದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ಭಾರತದ ಅನೇಕ ಪ್ರದೇಶಗಳು ವಾಡಿಕೆಗಿಂತ ಅಧಿಕ ಮಳೆಯಾಗುವ ನಿರೀಕ್ಷೆಯಿದೆಯೆಂದು ಐಎಂಡಿ ಈ ತಿಂಗಳ ಆರಂಭದಲ್ಲಿ ತಿಳಿಸಿತ್ತು.
ಆಕ್ಟೋಬರ್‌ನಲ್ಲಿ ವಾಡಿಕೆಗಿಂತ ಶೇ.15ರಷ್ಟು ಅಧಿಕ ಮಳೆಯಾಗಲಿದೆ ಎಂದು ಐಎಂಡಿ ವರಿಷ್ಠ ಮೃತ್ಯುಂಜಯ ಮಹಾಪಾತ್ರ ಅವರು ತಿಳಿಸಿದ್ದಾರೆ.