×
Ad

ಮೇ 27ರಂದು ಕೇರಳಕ್ಕೆ ಮುಂಗಾರು ಆಗಮನ

Update: 2025-05-10 20:48 IST

ಸಾಂದರ್ಭಿಕ ಚಿತ್ರ | PC : PTI 

ಹೊಸದಿಲ್ಲಿ: ನೈಋತ್ಯ ಮುಂಗಾರು ಮಾರುತವು ಕೇರಳ ಕರಾವಳಿಗೆ ವಾಡಿಕೆಗಿಂತ ಐದು ದಿನ ಮುಂಚಿತವಾಗಿ ಅಂದರೆ ಮೇ 27ರಂದು ಆಗಮಿಸಲಿದೆಯೆಂದು ಭಾರತದ ಹವಾಮಾನ ಇಲಾಖೆ(ಐಎಂಡಿ) ಶನಿವಾರ ತಿಳಿಸಿದೆ.

ಮುಂಗಾರಿನ ತ್ವರಿತ ಆಗಮನವು ಖಾರಿಫ್ ಋತುವಿನಲ್ಲಿ ಬಿತ್ತನೆಗೆ ಅನುಕೂಲಕರವಾಗಲಿದೆ. ಇದಕ್ಕೂ ಮುನ್ನ 2022ರಲ್ಲಿ ಮುಂಗಾರು ವಾಡಿಕೆಗಿಂತ ಮುಂಚಿತವಾಗಿ, ಅಂದರೆ ಮೇ 29ರಂದು ಕೇರಳ ಕರಾವಳಿಯನ್ನು ಪ್ರವೇಶಿಸಿತ್ತು. 2024ರಲ್ಲಿ ಮುಂಗಾರು ಮೇ 30ರಂದು ಕೇರಳಕ್ಕೆ ಆಗಮಿಸಿತ್ತು.

ಒಂದು ವೇಳೆ ಮುಂಗಾರು ಕೇರಳಕ್ಕೆ ನಿರೀಕ್ಷಿತ ದಿನಾಂಕದೊಳಗೆ ಆಗಮಿಸಿದ್ದೇ ಆದಲ್ಲಿ, ಇದು 2009ರಿಂದೀಚೆಗೆ ಭಾರತದ ಮುಖ್ಯಭೂಮಿಗೆ ಮುಂಗಾರಿನ ಅತ್ಯಂತ ತ್ವರಿತ ಆಗಮನವೆನಿಸಲಿದೆ. 2009ರಲ್ಲಿ ಮುಂಗಾರು ಮೇ 23ರಂದು ಕೇರಳಕ್ಕೆ ಆಗಮಿಸಿತ್ತು.

ಮುಂಗಾರು ಮಳೆಯು ಜುಲೈ 8ರೊಳಗೆ ಇಡೀ ದೇಶವನ್ನು ಆವರಿಸಲಿದೆ. ಸೆಪ್ಟೆಂಬರ್ 17ರ ವೇಳೆಗೆ ವಾಯವ್ಯ ಭಾರತದಿಂದ ಆರಂಭಗೊಳ್ಳುವ ಮುಂಗಾರಿನ ನಿರ್ಗಮನವು ಅಕ್ಟೋಬರ್ 15ರೊಳಗೆ ಪೂರ್ಣಗೊಳ್ಳಲಿದೆ.

ಭಾರತೀಯ ಹವಾಮಾನ ಇಲಾಖೆ ಹಾಗೂ ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ‘ಸ್ಕೈಮೆಟ್’ ಇವೆರಡೂ, ಈ ಸಲ ‘ಸಾಮಾನ್ಯ’ ಅಥವಾ ‘ಸಾಮಾನ್ಯಕ್ಕಿಂತ ಅಧಿಕ’ ಪ್ರಮಾಣದಲ್ಲಿ ಮುಂಗಾರು ಮಳೆಯಾಗುವ ನಿರೀಕ್ಷೆಯಿದೆಯೆಂದು ಭವಿಷ್ಯ ನುಡಿದಿವೆ.

ನಾಲ್ಕು ತಿಂಗಳುಗಳ ಮಂಗಾರು ಋತುವಿನಲ್ಲಿ ಭಾರತವು ಸಾಮಾನ್ಯಕ್ಕಿಂತ ಅಧಿಕ ಮಳೆಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.ಈ ಸಲ ಒಟ್ಟು ಶೇ.105 ( ಶೇ.5ರಷ್ಟು ಹೆಚ್ಚುಕಮ್ಮಿ) ರಷ್ಟು ಮಳೆಯಾಗುವ ಸಾಧ್ಯತೆಯಿದೆಯೆಂದು ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರವಿಚಂದ್ರನ್ ತಿಳಿಸಿದ್ದಾರೆ.

50 ವರ್ಷಗಳ ಸರಾಸರಿ 87 ಶೇ.ವನ್ನು ಮಾನದಂಡವಾಗಿಸಿಕೊಂಡು, ಶೇ.96ರಿಂದ ಶೇ.104ರಷ್ಟು ಪ್ರಮಾಣದ ಮಳೆಯನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಶೇ.90ರಿಂದ ಶೇ.95ರಷ್ಟು ಪ್ರಮಾಣದ ಮಳೆಯನ್ನು ಸಾಮಾನ್ಯಕ್ಕಿಂತ ಕಡಿಮೆ , ಶೇ.105 ರಿಂದ ಶೇ.105ರಷ್ಟು ಪ್ರಮಾಣದ ಮಳೆಯನ್ನು ಸಾಮಾನ್ಯಕ್ಕಿಂತ ಅಧಿಕ ಹಾಗೂ ಶೇ.110ಕ್ಕಿಂತ ಅಧಿಕ ಪ್ರಮಾಣದ ಮಳೆಯನ್ನು ‘ವಿಪರೀತ ’ಎಂದು ಪರಿಗಣಿಸಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News