ಮಾರ್ಚ್-ಮೇಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಬಿಸಿ ಗಾಳಿ ಬೀಸಲಿದೆ: ಐಎಂಡಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಬೆಚ್ಚಗಿನ ಫೆಬ್ರವರಿಯ ಹಿನ್ನೆಲೆಯಲ್ಲಿ ದೇಶದ ಹೆಚ್ಚಿನ ಪ್ರದೇಶಗಳು ಮಾರ್ಚ್‌ನಲ್ಲಿ ಸರಾಸರಿಗಿಂತ ಹೆಚ್ಚಿನ ತಾಪಮಾನವನ್ನು ಅನುಭವಿಸುವ ಸಾಧ್ಯತೆ ಇದೆ ಎದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ದೇಶದ ಹೆಚ್ಚಿನ ಪ್ರದೇಶಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನಗಳೆರಡೂ ಸರಾಸರಿಗಿಂತ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಡಿ.ಎಸ್. ಪೈ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭಾರತದಾದ್ಯಂತ ಈ ವರ್ಷ 10.9 ಮಿ.ಮೀ. ಮಳೆಯಾಗಿದ್ದು, ಇದು 1901ರಿಂದ 18ನೇ ಅತಿ ಕನಿಷ್ಠ ಹಾಗೂ 2001ರಿಂದ 5ನೇ ಅತಿ ಕನಿಷ್ಠವಾಗಿದೆ. ದಕ್ಷಿಣ ಭಾರತದ ದಕ್ಷಿಣ ಭಾಗದಲ್ಲಿ 1901ರಿಂದ 10ನೇ ಕನಿಷ್ಠವಾಗಿದೆ (1.2 ಮಿ.ಮೀ.) ಹಾಗೂ 2001ರಿಂದ 4ನೇ ಕನಿಷ್ಠವಾಗಿದೆ ಎಂದು ಐಎಂಡಿ ತಿಳಿಸಿದೆ.
‘‘ಮುಂದಿನ ಬಿಸಿ ಹವಾಮಾನದ ಋತು (ಮಾಚ್‌ನಿಂದ ಮೇ)ವಿನಲ್ಲಿ ದಕ್ಷಿಣ ಭಾರತದ ದಕ್ಷಿಣ ಭಾಗವನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಅಧಿಕವಾಗಿರಲಿದೆ. ದಕ್ಷಿಣ ಭಾರತದ ದಕ್ಷಿಣ ಭಾಗ ಹಾಗೂ ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕನಿಷ್ಠ ಇರಲಿದೆ’’ ಎಂದು ಐಎಂಡಿ ತಿಳಿಸಿದೆ.
2025 ಮಾರ್ಚ್‌ನಿಂದ ಮೇ ವರೆಗಿನ ಋತುಮಾನದ ಸಂದರ್ಭ ಈಶಾನ್ಯ ಭಾರತ, ಉತ್ತರಭಾರತ, ದಕ್ಷಿಣ ಭಾರತದ ನೈಋತ್ಯ ಹಾಗೂ ದಕ್ಷಿಣದ ಭಾಗಗಳನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ದಿನಗಳಲ್ಲಿ ಬಿಸಿ ಗಾಳಿ ಬೀಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.