×
Ad

ಹೆಚ್ಚಿನ ರಾಜ್ಯಗಳು ಕೇಂದ್ರದಿಂದ ಶೇ.50ರಷ್ಟು ತೆರಿಗೆ ಆದಾಯ ಬಯಸುತ್ತಿವೆ: ಹಣಕಾಸು ಆಯೋಗದ ಅಧ್ಯಕ್ಷ

Update: 2025-06-05 15:49 IST

 ಅರವಿಂದ ಪನಗಾರಿಯಾ  | PC : fincomindia.nic.in

ಹೊಸದಿಲ್ಲಿ: 28 ರಾಜ್ಯಗಳ ಪೈಕಿ 22ಕ್ಕೂ ಅಧಿಕ ರಾಜ್ಯಗಳು ತೆರಿಗೆ ಆದಾಯ ವಿತರಣೆಯಲ್ಲಿ ತಮ್ಮ ಪಾಲನ್ನು ಈಗಿನ ಶೇ.41ರಿಂದ ಶೇ.50ಕ್ಕೆ ಹೆಚ್ಚಿಸುವಂತೆ ಕೇಳಿಕೊಂಡಿವೆ ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ ಪನಗಾರಿಯಾ ಹೇಳಿದ್ದಾರೆ. ಪ್ರಸ್ತುತ ತೆೆರಿಗೆ ಆದಾಯದ ಶೇ.59ರಷ್ಟನ್ನು ಕೇಂದ್ರ ಸರಕಾರವು ಉಳಿಸಿಕೊಳ್ಳುತ್ತದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪನಗಾರಿಯಾ, ತೆರಿಗೆ ಆದಾಯದ ಈ ವಿಭಜನೆಯನ್ನು ಹಿಂದಿನ ಹಣಕಾಸು ಆಯೋಗವು ನಿರ್ಧರಿಸಿತ್ತು ಎಂದು ತಿಳಿಸಿದರು.

2023ರಲ್ಲಿ ರಚನೆಯಾದ 16ನೇ ಹಣಕಾಸು ಆಯೋಗಕ್ಕೆ ಎಪ್ರಿಲ್ 2026 ಮತ್ತು ಮಾರ್ಚ್ 2031ರ ನಡುವಿನ ಐದು ವರ್ಷಗಳ ಅವಧಿಗೆ ತೆರಿಗೆ ಆದಾಯದ ಹೊಸ ವಿಭಜನೆಯನ್ನು ಶಿಫಾರಸು ಮಾಡುವಂತೆ ಸೂಚಿಸಲಾಗಿದೆ.

ಆಯೋಗವು ಪ್ರಸ್ತುತ ರಾಜ್ಯವಾರು ಸಮಾಲೋಚನೆಗಳನ್ನು ನಡೆಸುತ್ತಿದೆ. ಹೆಚ್ಚಿನ ಇತರ ರಾಜ್ಯ ಸರಕಾರಗಳಂತೆ ಉತ್ತರ ಪ್ರದೇಶವು ಕೂಡ ತನ್ನ ತೆರಿಗೆ ಆದಾಯದ ಪಾಲನ್ನು ಈಗಿನ ಶೇ.41ರಿಂದ ಶೇ.50ಕ್ಕೆ ಹೆಚ್ಚಿಸುವಂತೆ ಕೇಳಿಕೊಂಡಿದೆ ಎಂದು ಪನಗಾರಿಯಾ ತಿಳಿಸಿದರು.

ಆಯೋಗವು ತನ್ನ ಅಂತಿಮ ವರದಿಯಲ್ಲಿ ರಾಜ್ಯಗಳಿಗೆ ಶೇ.50ರಷ್ಟು ಪಾಲನ್ನು ಶಿಫಾರಸು ಮಾಡಲಿದೆಯೇ ಎಂಬ ಪ್ರಶ್ನೆಗೆ ಪನಗಾರಿಯಾ,‘ಪ್ರಾಯೋಗಿಕವಾಗಿ ಹೇಳುವುದಾದರೆ ಆಯೋಗವು ಏನು ಮಾಡಲಿದೆ ಎನ್ನುವುದನ್ನು ನಾನು ನಿಮಗೆ ತಿಳಿಸಲು ಸಾಧ್ಯವಿಲ್ಲ,ಏಕೆಂದರೆ ಅದು ಆಯೋಗದ ಪೂರ್ಣ ಸದಸ್ಯತ್ವದ ನಿರ್ಧಾರವಾಗಿರುವುದರಿಂದ ನನಗೂ ತಿಳಿದಿಲ್ಲ. ಆದರೂ ಅದು ಶೇ.50ರಷ್ಟು ಆಗುವುದಿಲ್ಲ ಎಂದು ನಾನು ಊಹಿಸಬಹುದು, ಏಕೆಂದರೆ ಅದು ತೀವ್ರ ಏರಿಕೆಯಾಗುತ್ತದೆ ಮತ್ತು ಅದು ಸೂಕ್ತವಲ್ಲ’ ಎಂದು ಉತ್ತರಿಸಿದರು.

ಹಿಂದೆ ಸರಕಾರವು ಹಣಕಾಸು ಆಯೋಗಗಳ ಶಿಫಾರಸುಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದೆ ಎಂದು ಅವರು ಬೆಟ್ಟು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News