×
Ad

ಅಂತರ್ಜಾತಿ ಯುವಕನ ಜತೆ ಪ್ರೇಮಸಂಬಂಧ: ಮಗಳನ್ನೇ ಹತ್ಯೆಗೈದ ತಾಯಿ!

Update: 2025-04-14 13:05 IST

ಸಾಂದರ್ಭಿಕ ಚಿತ್ರ

ವಿಜಯವಾಡ: ಬೇರೆ ಜಾತಿಗೆ ಸೇರಿದ ಯುವಕನನ್ನು ಪ್ರೇಮಿಸಿದ ಹದಿಹರೆಯದ ಪುತ್ರಿಯನ್ನು ತಾಯಿಯೇ ಹತ್ಯೆ ಮಾಡಿದ ಘಟನೆ ತಿರುಪತಿ ಜಿಲ್ಲೆಯಿಂದ ವರದಿಯಾಗಿದೆ.

ಹದಿನಾರು ವರ್ಷದ ಯುವತಿ ಬೇರೆ ಜಾತಿಗೆ ಸೇರಿದ 20 ವರ್ಷದ ಯುವಕನನ್ನು ಮೂರು ವರ್ಷದಿಂದ ಪ್ರೀತಿಸುತ್ತಿದ್ದಳು. ಇಬ್ಬರ ಕುಟುಂಬಗಳಿಂದಲೂ ಇದಕ್ಕೆ ವಿರೋಧವಿದ್ದರೂ, ಕಳೆದ ವರ್ಷ ಅಪ್ರಾಪ್ತ ವಯಸ್ಸಿನ ಯುವ ಜೋಡಿ ವಿವಾಹ ಬಂಧನಕ್ಕೆ ಒಳಗಾಗಿದ್ದರು. ಯುವಕನ ವಿರುದ್ಧ ಯುವತಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಯುವಕನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದರು ಎಂದು ಡಿಎಸ್ಪಿ ಬೇತಪುಡಿ ಪ್ರಸಾದ್ ವಿವರ ನೀಡಿದ್ದಾರೆ.

ಏತನ್ಮಧ್ಯೆ ಯುವತಿ ಗರ್ಭಿಣಿಯಾಗಿದ್ದು, ತಾಯಿಯ ಬಲವಂತದಿಂದ ಗರ್ಭಪಾತ ಮಾಡಿಸಿಕೊಂಡಿದ್ದಳು. ಯುವಕ ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ. ಎಪ್ರಿಲ್ 4ರಂದು ಯುವತಿ ಅತನನ್ನು ದೂರವಾಣಿಯಲ್ಲಿ ಸಂಪರ್ಕಿಸುವ ಪ್ರಯತ್ನ ಮಾಡಿದ್ದಳು. ಇದರಿಂದ ಕೋಪಗೊಂಡ ತಾಯಿ ತನ್ನ ಮಗಳನ್ನು ಉಸಿರುಗಟ್ಟಿಸಿ ಸಾಯಿಸಿದ್ದಾಳೆ. ಮಗಳನ್ನು ಕೊಂದ ತಾಯಿ ಕೆಲವೇ ಗಂಟೆಗಳಲ್ಲಿ ಸ್ವರ್ಣಮುಖಿ ನದಿಯ ದಂಡೆಯಲ್ಲಿ ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದಾಳೆ. ಆರೋಪಿ 34 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ತರಾತುರಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಎಪ್ರಿಲ್ 9ರಂದು ಕಂದಾಯ ಅಧಿಕಾರಿಗಳು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿದಾಗ ಮಹಿಳೆ ಮನೆಯಿಂದ ಪರಾರಿಯಾಗಿದ್ದಳು. ಶುಕ್ರವಾರ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಮಹಿಳೆ ಶರಣಾಗಿದ್ದು, ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಳೆ. ಸಿಟ್ಟು, ಭಯ ಮತ್ತು ಸಾಮಾಜಿಕ ಒತ್ತಡದಿಂದ ಈ ಕೃತ್ಯ ಎಸಗಿದ್ದಾಗಿ ಮಹಿಳೆ ಹೇಳಿದ್ದಾಳೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News