ಮೌಂಟ್ ಎವರೆಸ್ಟ್ ನಲ್ಲಿ ಭಾರತೀಯ ಪರ್ವತಾರೋಹಿ ಸಹಿತ ಇಬ್ಬರು ಮೃತ್ಯು
ಮೌಂಟ್ ಎವರೆಸ್ಟ್ | PTI
ಕಠ್ಮಂಡು: ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನಲ್ಲಿ ಓರ್ವ ಭಾರತೀಯ ಹಾಗೂ ಇನ್ನೋರ್ವ ಫಿಲಿಪ್ಪೀನ್ಸ್ ಪ್ರಜೆ ಸೇರಿದಂತೆ ಇಬ್ಬರು ಪರ್ವತಾರೋಹಿಗಳು ಪ್ರತ್ಯೇಕ ಘಟನೆಗಳಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೌಂಟ್ ಎವರೆಸ್ಟ್ ನ ಪ್ರಸಕ್ತ ಪರ್ವತಾರೋಹಣ ಋತುವಾದ ಮಾರ್ಚ್-ಮೇ ತಿಂಗಳಲ್ಲಿ ವರದಿಯಾದ ಪರ್ವತಾರೋಹಿಗಳ ಸಾವಿನ ಮೊದಲ ಪ್ರಕರಣ ಇದಾಗಿದೆ.
ಭಾರತೀಯ ಪ್ರಜೆ, 45 ವರ್ಷ ವಯಸ್ಸಿನ ಸುಬ್ರತಾ ಘೋಷ್ ಅವರು 29,032 ಅಡಿ ಎತ್ತರದ ಎವರೆಸ್ಟ್ ಶಿಖರವನ್ನೇರಿ ಹಿಂತಿರುಗುತ್ತಿದ್ದಾಗ ಹಿಲ್ಲರಿ ಸ್ಟೆಪ್ ನ ಕೆಳಪ್ರದೇಶದಲ್ಲಿ ಸಾವನ್ನಪ್ಪಿದ್ದಾಗಿ ತಿಳಿದುಬಂದಿದೆ.
ಸುಬ್ರತಾ ಘೋಷ್ ಅವರು ಹಿಲ್ಲರಿಸ್ಟೆಪ್‌ನಿಂದ ಕೆಳಗಿಳಿಯಲು ನಿರಾಕರಿಸಿದ್ದಾಗಿ ನೇಪಾಳದ ಪರ್ವತಾರೋಹಣ ಸಂಘಟನಾ ಸಂಸ್ಥೆ ಸ್ನೋಯಿಹಾರಿಝನ್ ತಿಳಿಸಿದೆ.
ಎವರೆಸ್ಟ್ ಶಿಖರ ಹಾಗೂ 8 ಸಾವಿರ ಅಡಿ ಎತ್ತರ ದಕ್ಷಿಣ ಕೋಲ್ ನಡುವೆ ಇರುವ ಹಿಲ್ಲರಿಸ್ಟೆಪ್ ಗಿರಿಶೃಂಗವಿದೆ. ಆಮ್ಲಜನಕದ ಪ್ರಮಾಣವು ಪ್ರಾಣವುಳಿಸಿಕೊಳ್ಳುವುದಕ್ಕೆ ಬೇಕಾದಷ್ಟು ಪ್ರಮಾಣದಲ್ಲಿ ಇಲ್ಲದೆ ಇರುವುದರಿಂದ ಅದನ್ನು ಸಾವಿನ ವಲಯವೆಂದೇ ಕರೆಲಾಗುತ್ತದೆ.
ಸುಬ್ರತಾ ಘೋಷ್ ಅವರ ಮೃತದೇಹವನ್ನು ಬೇಸ್ ಕ್ಯಾಂಪ್‌ಗೆ ತರಲು ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಅವರ ಸಾವಿನ ಕಾರಣವನ್ನು ಮರಣೋತ್ತರ ಪರೀಕ್ಷೆಯ ಆನಂತರವಷ್ಟೇ ತಿಳಿದುಬರಲಿದೆ ಎಂದು ಬೋಧರಾಜ್ ಭಂಡಾರಿ ತಿಳಿಸಿದ್ದಾರೆ.
ಈ ಮಧ್ಯೆ ಎವರೆಸ್ಟ್ ಶಿಖರವನ್ನೇರುತ್ತಿದ್ದ 45 ವರ್ಷ ವಯಸ್ಸಿನ ಫಿಲಿಪ್ಪೀನ್ಸ್ ಪ್ರಜೆ ಫಿಲಿಪ್ II ಸ್ಯಾಂಟಿಯಾಗೊ ಅವರು ಬುಧವಾರ ಬೆಳಗ್ಗೆ ಸೌತ್ ಕೊಲ್ ನಲ್ಲಿ ಮೃತಪಟ್ಟಿದ್ದಾರೆಂದು ನೇಪಾಳ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಹಿಮಾಲ್ ಗೌತಮ್ ತಿಳಿಸಿದ್ದಾರೆ.
ಸ್ಯಾಂಟಿಯಾಗೊ ಅವರು ನಾಲ್ಕನೇ ಶಿಬಿರವನ್ನು ತಲುಪಿದಾಗ ತೀವ್ರವಾಗಿ ಬಳಲಿದ್ದರು ಹಾಗೂ ತನ್ನ ಡೇರೆಯಲ್ಲಿ ವಿಶ್ರಮಿಸುತ್ತಿದ್ದಾಗ ನಿಧನರಾದರೆಂದು ಗೌತಮ್ ತಿಳಿಸಿದ್ದಾರೆ.
ಘೋಷ್ ಹಾಗೂ ಗೌತಮ್ ಇವರಿಬ್ಬರೂ ನೇಪಾಳದ ಸ್ನೋಯಿ ಹೊರಿಝಾನ್ ಸಂಸ್ಥೆಯ ಅಂತಾರಾಷ್ಟ್ರೀಯ ಪರ್ವತಾರೋಹಣದ ಸದಸ್ಯರೆಂದು ತಿಳಿದುಬಂದಿದೆ.
ಮೇ ತಿಂಗಳಲ್ಲಿ ಅಂತ್ಯಗೊಳ್ಳಲಿರುವ ಹಾಲಿ ಪರ್ವತಾರೋಹಣ ಋತುವಿನಲ್ಲಿ ಎವರೆಸ್ಟ್ ಶಿಖರವನ್ನು ಏರಲು ನೇಪಾಳವು 459 ಪರ್ಮಿಟ್‌ಗಳನ್ನು ವಿತರಿಸಿತ್ತು. ಸುಮಾರು 100 ಮಂದಿ ಪರ್ವತಾರೋಹಿಗಳು ಈ ವಾರದಲ್ಲಿ ಈಗಾಗಲೇ ಎವರೆಸ್ಟ್ ಶೃಂಗವನ್ನೇರಿದ್ದಾರೆ.