ಲಕ್ಷದ್ವೀಪ ಶಾಲೆಗಳಲ್ಲಿ ಅರೆಬಿಕ್ ಮತ್ತು ಮಹಲ್ ಭಾಷೆಗಳನ್ನು ಕೈಬಿಡುವ ಕ್ರಮ ತೀವ್ರ ಆತಂಕಕಾರಿ: ಕೇರಳ ಸಚಿವ
ವಿ.ಶಿವನ್‌ಕುಟ್ಟಿ | PC : X \ @VSivankuttyCPIM
ತಿರುವನಂತಪುರ: ಶಾಲಾ ಪಠ್ಯಕ್ರಮದಿಂದ ಅರೆಬಿಕ್ ಮತ್ತು ಮಹಲ್ ಭಾಷೆಗಳನ್ನು ತೆಗೆದುಹಾಕುವ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ ಆಡಳಿತದ ನಿರ್ಧಾರಕ್ಕೆ ಕೇರಳದ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ ಅವರು ತೀವ್ರ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಮೇ 14ರಂದು ಲಕ್ಷದ್ವೀಪದ ಶಿಕ್ಷಣ ಇಲಾಖೆಯು 2023ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಡಿ ಈ ಎರಡು ಭಾಷೆಗಳನ್ನು ತೆಗೆದುಹಾಕುವ ಬಗ್ಗೆ ನಿರ್ದೇಶನವನ್ನು ಹೊರಡಿಸಿದೆ. ಈ ಚೌಕಟ್ಟು 2020ರ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯ ಪ್ರಮುಖ ಭಾಗವಾಗಿದೆ.
ಮಾಲಿಕು ಉಪಭಾಷೆ ಎಂದೂ ಕರೆಯಲ್ಪಡುವ ಮಹಲ್ ಭಾಷೆಯು ಮಾಲ್ದೀವ್ಸ್‌ನ ಅಧಿಕೃತ ಭಾಷೆಯಾದ ಧಿವೆಹಿಯ ರೂಪಾಂತರವಾಗಿದ್ದು,ಮೂಲ ಭಾಷೆಯ ಅಂಶಗಳನ್ನು ಉಳಿಸಿಕೊಂಡಿದೆ,ಆದರೆ ಮಲಯಾಳಂ ಭಾಷೆಯ ಪ್ರಭಾವವನ್ನೂ ಹೊಂದಿದೆ.
ಲಕ್ಷದ್ವೀಪ ನಡುಗಡ್ಡೆಗಳ ದಕ್ಷಿಣ ತುದಿಯ ದ್ವೀಪವಾಗಿರುವ ಮಿನಿಕಾಯ್‌ನಲ್ಲಿಯ ಮಲಯಾಳಂ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಈಗ ಮಲಯಾಳಂ ಮತ್ತು ಇಂಗ್ಲಿಷ್ ಅನುಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಭಾಷೆಗಳಾಗಿರುತ್ತವೆ. ತೃತೀಯ ಭಾಷೆಯಾಗಿ ಮಹಲ್ ಮತ್ತು ಅರೆಬಿಕ್ ಬದಲು ಹಿಂದಿಯನ್ನು ಬೋಧಿಸಲಾಗುವುದು ಎಂದು ಮೇ 14ರ ನಿರ್ದೇಶನದಲ್ಲಿ ತಿಳಿಸಲಾಗಿದೆ.
ಶಾಲಾ ಪಠ್ಯಕ್ರಮದಿಂದ ಎರಡೂ ಭಾಷೆಗಳನ್ನು ಕೈಬಿಡುವ ನಿರ್ಧಾರವು ಲಕ್ಷದ್ವೀಪದಲ್ಲಿ ಪ್ರತಿಭಟನೆಗಳನ್ನು ಹುಟ್ಟುಹಾಕಿತ್ತು.
ಬುಧವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಶಿವನ್‌ಕುಟ್ಟಿ, ಎನ್‌ಇಪಿಯನ್ನು ಜಾರಿಗೊಳಿಸುವ ನೆಪದಲ್ಲಿ ಇವೆರಡೂ ಭಾಷೆಗಳನ್ನು ಪಠ್ಯಕ್ರಮದಿಂದ ತೆಗೆದುಹಾಕುವ ಕ್ರಮವು ಶಿಕ್ಷಣದಲ್ಲಿ ಮಾತೃಭಾಷೆಗಳು ಮತ್ತು ಪ್ರಾದೇಶಿಕ ವೈವಿಧ್ಯವನ್ನು ಉತ್ತೇಜಿಸುವ ಕೇಂದ್ರದ ಬದ್ಧತೆಗೆ ವಿರುದ್ಧವಾಗಿದೆ ಎಂದು ಹೇಳಿದರು.
ಲಕ್ಷದ್ವೀಪದ ಮಕ್ಕಳಿಗೆ ಅವರ ಭಾಷೆಯನ್ನು ಕಲಿಯುವ ಅವಕಾಶವನ್ನು ನಿರಾಕರಿಸುವ ಮೂಲಕ ಕೇಂದ್ರ ಸರಕಾರವು ಭಾಷಾ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳನ್ನೂ ಉಲ್ಲಂಘಿಸುತ್ತದೆ ಎಂದು ಪ್ರತಿಪಾದಿಸಿದ ಅವರು,ಈ ನಿರ್ಧಾರವು ರಾಷ್ಟ್ರವನ್ನು ವ್ಯಾಖ್ಯಾನಿಸಿರುವ ಬಹುತ್ವ ಮತ್ತು ಒಳಗೊಳ್ಳುವಿಕೆಯನ್ನು ದುರ್ಬಲಗೊಳಿಸಿದೆ ಎಂದು ಹೇಳಿದರು.
‘ಭಾಷೆಯು ಕೇವಲ ಸಂವಹನ ಮಾಧ್ಯಮವಲ್ಲ. ಅದು ಅನನ್ಯತೆ,ಇತಿಹಾಸ ಮತ್ತು ಸಂಸ್ಕೃತಿಯ ವಾಹಕವಾಗಿದೆ. ಶಿಕ್ಷಣ ನೀತಿಯ ಮೂಲಕ ಸ್ಥಳೀಯ ಭಾಷೆಗಳನ್ನು ವ್ಯವಸ್ಥಿತವಾಗಿ ಅಳಿಸಿಹಾಕುವುದು ನಮ್ಮ ಸಮಾಜದ ಸಾಂಸ್ಕೃತಿಕ ರಚನೆಯ ಮೇಲಿನ ದಾಳಿಗೆ ಸಮವಾಗಿದೆ’ ಎಂದು ಹೇಳಿದ ಶಿವನ್‌ಕುಟ್ಟಿ,ಕೇರಳವು ದ್ವೀಪದ ಜನರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುತ್ತದೆ. ಈ ಭಾಷಾ ಅನ್ಯಾಯದ ವಿರುದ್ಧ ಎಲ್ಲ ಪ್ರಜಾಪ್ರಭುತ್ವ ಶಕ್ತಿಗಳು,ಶೈಕ್ಷಣಿಕ ಸಮುದಾಯ ಮತ್ತು ಶಿಕ್ಷಣ ಸಂಸ್ಥೆಗಳು ಧ್ವನಿಯೆತ್ತಬೇಕು ಹಾಗೂ ನಿರ್ಧಾರವನ್ನು ಹಿಂದೆಗೆದುಕೊಳ್ಳುವಂತೆ ಅಧಿಕಾರಿಗಳನ್ನು ಆಗ್ರಹಿಸಬೇಕು ಎಂದರು.