ಗಾಂಧಿ ಜಯಂತಿ : ಜೈಲಿನಲ್ಲಿರುವ ಸಂಸದ ಎಂಜಿನಿಯರ್ ರಶೀದ್‌ರಿಂದ ಎರಡು ದಿನಗಳ ಉಪವಾಸ ಮುಷ್ಕರ
ಎಂಜಿನಿಯರ್ ರಶೀದ್ | PC : PTI
ಶ್ರೀನಗರ, ಸೆ. 27: ಮಹಾತ್ಮಾ ಗಾಂಧಿ ಅವರ ಅಹಿಂಸೆಯ ತತ್ವ ಎತ್ತಿ ಹಿಡಿಯಲು ಗಾಂಧಿ ಜಯಂತಿಯ ಮುನ್ನ ಎರಡು ದಿನಗಳ ಉಪವಾಸ ಮುಷ್ಕರ ನಡೆಸುವುದಾಗಿ ಜೈಲಿನಲ್ಲಿರುವ ಜಮ್ಮು ಹಾಗೂ ಕಾಶ್ಮೀರದ ಬಾರಾಮುಲ್ಲಾದ ಲೋಕಸಭಾ ಸದಸ್ಯ ಶೇಖ್ ಅಬ್ದುಲ್ ರಶೀದ್ ಶನಿವಾರ ಹೇಳಿದ್ದಾರೆ.
ಕೈಬರೆಹದಲ್ಲಿ ‘ಬಾಪು’ ವಿಳಾಸಕ್ಕೆ ಬರೆದಿರುವ ಹಾಗೂ ಲೋಕಸಭಾ ಸ್ಪೀಕರ್‌ಗೆ ರವಾನಿಸಲಾದ ಪತ್ರದಲ್ಲಿ ಪ್ರಸ್ತುತ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದ ಪ್ರಕರಣದಲ್ಲಿ ಹೊಸದಿಲ್ಲಿಯ ತಿಹಾರ್ ಕಾರಾಗೃಹದಲ್ಲಿರುವ ರಶೀದ್, ಇಡೀ ಜಗತ್ತಿಗೆ ಶಾಂತಿಯ ಅಗತ್ಯತೆ ತುಂಬಾ ಇದೆ ಎಂದಿದ್ದಾರೆ.
ಗಾಂಧಿ ಅವರ ಅಹಿಂಸಾ ತತ್ವ ಎಂದಿಗಿಂತಲೂ ಈಗ ಅಗತ್ಯವಿದೆ ಪ್ರತಿಪಾದಿಸಿದ ಅವರು, ವಿಶ್ವದಾದ್ಯಂತ ರಾಷ್ಟ್ರಗಳು ಶಾಂತಿಗಾಗಿ ಹೋರಾಡುವುದಾಗಿ ಹೇಳಿಕೊಳ್ಳುತ್ತಿದ್ದರೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹಿಂಸಾಚಾರದಲ್ಲಿ ತೊಡಗಿಕೊಳ್ಳುವುದನ್ನು ಮುಂದುವರಿಸಿವೆ ಎಂದರು.
ವಿಭಜನೆಯ ಸಂದರ್ಭದಲ್ಲಿ ಗಾಂಧಿ ಅವರ ಪಾತ್ರವನ್ನು ನೆನಪಿಸಿಕೊಂಡ ರಶೀದ್, ಉಪಖಂಡ ಕೋಮು ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವಾಗ, ನೀವು ಕಾಶ್ಮೀರವನ್ನು ಭರವಸೆ ಹಾಗೂ ಸಾಮರಸ್ಯದ ಸಂಕೇತವಾಗಿ ನೋಡಿದ್ದೀರಿ ಎಂದರು.