ಕೆಮ್ಮಿನ ಔಷಧಿಯಿಂದ ಮೃತ್ಯು ಪ್ರಕರಣ | ಮಕ್ಕಳ ಜೀವದೊಂದಿಗೆ ಚೆಲ್ಲಾಟ ಆಡುವವರನ್ನು ಸರಕಾರ ಸುಮ್ಮನೆ ಬಿಡುವುದಿಲ್ಲ: ಮಧ್ಯಪ್ರದೇಶ ಸಿಎಂ ಯಾದವ್ ಎಚ್ಚರಿಕೆ
Photo Credit : PTI
ಭೋಪಾಲ್/ನಾಗ್ಪುರ: ಮಧ್ಯಪ್ರದೇಶದಲ್ಲಿ ಕೋಲ್ಡ್ರಿಫ್ ಕೆಮ್ಮಿನ ಔಷಧಿ ಸೇವನೆಯಿಂದ 22 ಮಕ್ಕಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಗುರುವಾರ ಎಚ್ಚರಿಕೆ ನೀಡಿರುವ ಮುಖ್ಯಮಂತ್ರಿ ಮೋಹನ್ ಯಾದವ್, ಮಕ್ಕಳ ಜೀವದೊಂದಿಗೆ ಚೆಲ್ಲಾಟ ಆಡುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಕಠಿಣ ಸಂದೇಶ ರವಾನಿಸಿದ್ದಾರೆ.
ಮಧ್ಯಪ್ರದೇಶದ ಕೆಲವು ಮಕ್ಕಳು ಚಿಕಿತ್ಸೆ ಪಡೆಯುತ್ತಿರುವ ನಾಗ್ಪುರಕ್ಕೆ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮೋಹನ್ ಯಾದವ್, “ನಮ್ಮ ಸರಕಾರ ಪ್ರತಿ ಸಂತ್ರಸ್ತ ಕುಟುಂಬದೊಂದಿಗೆ ನಿಲ್ಲಲಿದೆ. ಮುಗ್ಧ ಮಕ್ಕಳ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಛಿಂದ್ವಾರಾದಲ್ಲಿ ನಡೆದಿರುವ ಈ ದುರಂತಮಯ ಘಟನೆಯಲ್ಲಿ ಮುಗ್ಧ ಮಕ್ಕಳು ಬಲಿಯಾಗಿರುವುದು ನಮಗೆ ನಿಜಕ್ಕೂ ದುಃಖವನ್ನುಂಟು ಮಾಡಿದೆ” ಎಂದು ತಿಳಿಸಿದ್ದಾರೆ.
“ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಾವು ವಿಶೇಷ ತನಿಖಾ ತಂಡದ ರಚನೆಗೆ ಆದೇಶಿಸಿದ್ದೇವೆ. ವಿಷಕಾರಿ ಔಷಧವನ್ನು ತಯಾರಿಸಿದ ಔಷಧ ಕಾರ್ಖಾನೆಯ ಮಾಲಕ ರಂಗನಾಥನ್ ನನ್ನು ಇಂದು ಚೆನ್ನೈನಿಂದ ಮಧ್ಯಪ್ರದೇಶದ ವಿಶೇಷ ತನಿಖಾ ತಂಡದ ಪೊಲೀಸರು ಬಂಧಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡುವ ಯಾರನ್ನೂ ರಾಜ್ಯ ಸರಕಾರ ಸುಮ್ಮನೆ ಬಿಡುವುದಿಲ್ಲ. ಈ ಕ್ರಮವು ಸಾರ್ವಜನಿಕ ಕಲ್ಯಾಣದೆಡೆಗಿನ ನಮ್ಮ ಸರಕಾರದ ಸಂವೇದನಾಶೀಲತೆ, ತ್ವರಿತತೆ ಹಾಗೂ ಬದ್ಧತೆಗೆ ಸಾಕ್ಷಿಯಾಗಿದೆ” ಎಂದು ತಿಳಿಸಿದ್ದಾರೆ.
ತಮಿಳುನಾಡು ಮೂಲದ ಔಷಧ ಕಂಪೆನಿಯೊಂದು ತಯಾರಿಸಿದ್ದ ಕೆಮ್ಮು ಔಷಧಿ ಸೇವಿಸಿ, ಮೂತ್ರಪಿಂಡ ವೈಫಲ್ಯದಿಂದ 22 ಮಕ್ಕಳು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಈ ಪೈಕಿ ಬಹುತೇಕ ಮಕ್ಕಳು ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಗೆ ಸೇರಿದವರಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ನಸುಕಿನಲ್ಲಿ ತಮಿಳುನಾಡು ಮೂಲದ ಶ್ರೀಸನ್ ಫಾರ್ಮಾದ ಮಾಲಕ ರಂಗನಾಥನ್ ಎಂಬುವವರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಆತನ ಕಾಂಚೀಪುರಂ ಕಾರ್ಖಾನೆಯಿಂದ ಕೆಲವು ದಾಖಲೆಗಳನ್ನೂ ವಶಪಡಿಸಿಕೊಂಡಿದ್ದಾರೆ.