×
Ad

ಸಂಸದರ ನಿಧಿ ಬಳಕೆ: ಪಾರದರ್ಶಕತೆಯೇ ಅಥವಾ ರಾಜಕೀಯ ನಿಯಂತ್ರಣವೇ?

ಪಶ್ಚಿಮ ಬಂಗಾಳ ರಾಜಕೀಯ ಸಂಘರ್ಷದ ನಡುವೆ ಗರಿಗೆದರಿದ MPLADS ಕುರಿತ ಚರ್ಚೆ

Update: 2026-01-13 20:45 IST

Photo Credit : mplads.gov.in

ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ, ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ (MPLADS) ಬಳಕೆಯ ಕುರಿತು ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಐಪ್ಯಾಕ್ ಕಚೇರಿಯ ಮೇಲಿನ ದಾಳಿ ಆರೋಪ, ನಿಧಿ ಬಳಕೆಯ ಡೇಟಾ ಹಾಗೂ ಹೊಸ ಡಿಜಿಟಲ್ ಪೋರ್ಟಲ್ ವ್ಯವಸ್ಥೆಯು ಈ ಚರ್ಚೆಗೆ ಹೊಸ ತಿರುವು ನೀಡಿವೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ನಾಯಕರ MPLADS ನಿಧಿ ಬಳಕೆಯ ಅಂಕಿಅಂಶಗಳು ಸಾರ್ವಜನಿಕವಾಗುತ್ತಿದ್ದಂತೆ, ಸಂಸದರ ಬಳಿ ಎಷ್ಟು ಹಣ ಲಭ್ಯವಿರುತ್ತದೆ, ಆ ಹಣದ ಮೇಲೆ ಅವರ ಹಿಡಿತ ಎಷ್ಟಿದೆ, ಹಾಗೂ ನಿಧಿ ಬಳಕೆಗೆ ಕೇಂದ್ರ ಸರ್ಕಾರದ ಅಧಿಕಾರಶಾಹಿ ನಿಯಂತ್ರಣ ಇದೆಯೇ ಎಂಬ ಪ್ರಶ್ನೆಗಳು ಮತ್ತೆ ಮುನ್ನೆಲೆಗೆ ಬಂದಿವೆ.

MPLADS: ಹಿನ್ನೆಲೆ ಮತ್ತು ಉದ್ದೇಶ

ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ (MPLADS)ಯನ್ನು 1993ರಲ್ಲಿ ಆಗಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಜಾರಿಗೆ ತಂದಿದ್ದರು. ಸಂಸದರು ತಮ್ಮ ಕ್ಷೇತ್ರದ ಜನರ ತಕ್ಷಣದ ಅಗತ್ಯಗಳಿಗೆ ಸ್ಪಂದಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಯಿತು.

ಯೋಜನೆ ಆರಂಭದ ವೇಳೆ ಸಂಸದರಿಗೆ ವರ್ಷಕ್ಕೆ ಕೇವಲ 5 ಲಕ್ಷ ರೂಪಾಯಿ ಅನುದಾನ ನೀಡಲಾಗುತ್ತಿತ್ತು. ನಂತರದ ವರ್ಷಗಳಲ್ಲಿ ಹಂತ ಹಂತವಾಗಿ ಈ ಮೊತ್ತ ಹೆಚ್ಚಿಸಲ್ಪಟ್ಟಿದ್ದು, ಪ್ರಸ್ತುತ ಒಬ್ಬ ಸಂಸದನಿಗೆ ವರ್ಷಕ್ಕೆ 5 ಕೋಟಿ ರೂಪಾಯಿ ಅನುದಾನ ಲಭ್ಯವಾಗಿದೆ.

ಹಣ ಸಂಸದರ ಕೈಗೆ ಹೋಗುವುದಿಲ್ಲ

MPLADS ನಿಧಿ ನೇರವಾಗಿ ಸಂಸದರ ಖಾತೆಗೆ ಜಮೆಯಾಗುತ್ತದೆ ಎಂಬುದು ತಪ್ಪು ಕಲ್ಪನೆ. ಈ ಯೋಜನೆಯಡಿ ಸಂಸದರು ಶಿಫಾರಸು ಮಾಡುವ ಅಧಿಕಾರ ಮಾತ್ರ ಹೊಂದಿದ್ದಾರೆ.

ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ನೇರವಾಗಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾಯಿಸಲಾಗುತ್ತದೆ. ಸಂಸದರು ತಮ್ಮ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತಾರೆ. ಜಿಲ್ಲಾಡಳಿತ ತಾಂತ್ರಿಕ ಪರಿಶೀಲನೆ ನಡೆಸಿ, ಗುತ್ತಿಗೆದಾರರನ್ನು ನೇಮಿಸಿ ಕಾಮಗಾರಿಯನ್ನು ಕಾರ್ಯಗತಗೊಳಿಸುತ್ತದೆ. ಕಾಮಗಾರಿ ಪೂರ್ಣಗೊಂಡ ಬಳಿಕ, ಬಿಲ್ ಪಾವತಿಯೂ ಜಿಲ್ಲಾಡಳಿತದ ಮೂಲಕವೇ ನಡೆಯುತ್ತದೆ.

ನಿಧಿ ಬಳಕೆಯಲ್ಲಿ ನಾಯಕರ ಮಧ್ಯೆ ವ್ಯತ್ಯಾಸ

ಕೇಂದ್ರ ಸರ್ಕಾರದ E-Sakshi ಪೋರ್ಟಲ್ ನಲ್ಲಿ ಲಭ್ಯವಿರುವ ಮಾಹಿತಿಯಂತೆ, ವಿವಿಧ ನಾಯಕರ MPLADS ನಿಧಿ ಬಳಕೆಯಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ.

ಪ್ರಧಾನಿ ನರೇಂದ್ರ ಮೋದಿಗೆ ಹಳೆಯ ಬಾಕಿ ಸೇರಿ ಒಟ್ಟು 11.31 ಕೋಟಿ ರೂ. ಲಭ್ಯವಿದ್ದು, ಇದರಲ್ಲಿ ಸುಮಾರು 8.82 ಕೋಟಿ ರೂ. ವೆಚ್ಚವಾಗಿದೆ. ಅವರು 131 ಕಾಮಗಾರಿಗಳನ್ನು ಶಿಫಾರಸು ಮಾಡಿದ್ದು, ಅವುಗಳಲ್ಲಿ 96 ಕಾಮಗಾರಿಗಳು ಪೂರ್ಣಗೊಂಡಿವೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ 9.80 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದರೂ, ವೆಚ್ಚ ಕೇವಲ 48 ಲಕ್ಷ ರೂ. ಆಗಿದೆ ಎಂದು ಪೋರ್ಟಲ್ ತೋರಿಸುತ್ತದೆ.

ಗೃಹ ಸಚಿವ ಅಮಿತ್ ಶಾ ಅವರ ಕ್ಷೇತ್ರದಲ್ಲಿ 29 ಲಕ್ಷ ರೂ. ವೆಚ್ಚವಾಗಿದೆ ಎಂದು ದಾಖಲೆಗಳು ಸೂಚಿಸುತ್ತವೆ.

ಆದರೆ, ಪೋರ್ಟಲ್‌ನಲ್ಲಿ ಕಡಿಮೆ ವೆಚ್ಚ ತೋರಿದರೆ ಸಂಸದರು ಕೆಲಸ ಮಾಡುತ್ತಿಲ್ಲ ಎಂದು ಅರ್ಥೈಸುವುದು ಸರಿಯಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಾಮಗಾರಿ ಪೂರ್ಣಗೊಂಡು, ಜಿಲ್ಲಾಧಿಕಾರಿಗಳು ಬಿಲ್ ಪಾವತಿ ಮಾಡಿ, ಆ ಮಾಹಿತಿಯನ್ನು ಆನ್‌ಲೈನ್‌ ನಲ್ಲಿ ನವೀಕರಿಸಿದ ನಂತರವೇ ಅಂಕಿಅಂಶಗಳಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆ.

2023ರ ‘ಇ-ಸಾಕ್ಷಿ’ ಪೋರ್ಟಲ್ ಬದಲಾವಣೆ

2023ರಲ್ಲಿ ಕೇಂದ್ರ ಸರ್ಕಾರ MPLADSಗೆ ಸಂಬಂಧಿಸಿದಂತೆ ಹೊಸ ‘ಇ-ಸಾಕ್ಷಿ’ ಪೋರ್ಟಲ್ ಅನ್ನು ಜಾರಿಗೆ ತಂದಿದೆ. ಹಿಂದಿನ ವ್ಯವಸ್ಥೆಯಲ್ಲಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಬಳಕೆಯಾಗದೆ ಉಳಿಯುವ ಸಾಧ್ಯತೆ ಇತ್ತು. ಹೊಸ ವ್ಯವಸ್ಥೆಯಲ್ಲಿ ‘ಡ್ರಾಯಿಂಗ್ ಲಿಮಿಟ್’ ಜಾರಿಯಾಗಿದ್ದು, ಕಾಮಗಾರಿ ಪ್ರಾರಂಭವಾದಂತೆ ಹಂತ ಹಂತವಾಗಿ ಹಣ ಬಿಡುಗಡೆ ಆಗುತ್ತದೆ.

ಈ ವ್ಯವಸ್ಥೆಯ ಕುರಿತು ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ. ಟಿಎಂಸಿ ನಾಯಕರು, “ಕಾಮಗಾರಿಗಳು ನಡೆಯುತ್ತಿದ್ದರೂ ಪೋರ್ಟಲ್‌ನಲ್ಲಿ ಹಳೆಯ ಮಾಹಿತಿಯೇ ತೋರಿಸಲಾಗುತ್ತಿದೆ. ಇದರಿಂದ ಸಂಸದರ ಕಾರ್ಯಕ್ಷಮತೆಯನ್ನು ಜನರ ಮುಂದೆ ತಪ್ಪಾಗಿ ಚಿತ್ರಿಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.

ನಿಧಿ ಬಳಕೆಗೆ ಕಟ್ಟುನಿಟ್ಟಿನ ನಿಯಮಗಳು

MPLADS ನಿಧಿಯ ಬಳಕೆಗೆ ಕಟ್ಟುನಿಟ್ಟಿನ ನಿಯಮಗಳಿವೆ. ವರ್ಷಕ್ಕೆ ಸಿಗುವ 5 ಕೋಟಿ ರೂಪಾಯಿಗಳಲ್ಲಿ ಕನಿಷ್ಠ ಶೇ.15ರಷ್ಟು ಹಣವನ್ನು ಪರಿಶಿಷ್ಟ ಜಾತಿಗಳ ವಾಸಸ್ಥಳಗಳಲ್ಲಿ ಹಾಗೂ ಶೇ.7.5ರಷ್ಟು ಹಣವನ್ನು ಪರಿಶಿಷ್ಟ ಪಂಗಡಗಳ ಪ್ರದೇಶಗಳಲ್ಲಿ ಖರ್ಚು ಮಾಡುವುದು ಕಡ್ಡಾಯವಾಗಿದೆ.

ಭೂಕಂಪ, ಪ್ರವಾಹದಂತಹ ದೊಡ್ಡ ಪ್ರಕೃತಿ ವಿಕೋಪಗಳು ಸಂಭವಿಸಿದಲ್ಲಿ, ಸಂಸದರು ತಮ್ಮ ನಿಧಿಯಿಂದ 1 ಕೋಟಿ ರೂಪಾಯಿವರೆಗೆ ಬೇರೆ ರಾಜ್ಯಕ್ಕೂ ನೆರವು ನೀಡಬಹುದಾಗಿದೆ.

ರಾಜಕೀಯ ಸಂಘರ್ಷದ ಕೇಂದ್ರಬಿಂದುವಾಗುತ್ತಿರುವ MPLADS

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಡುವಿನ ವಾಗ್ವಾದದಲ್ಲಿ MPLADS ಪ್ರಮುಖ ಅಂಶವಾಗಿ ಹೊರಹೊಮ್ಮಿದೆ. ಐಪ್ಯಾಕ್‌ನಂತಹ ಸಂಸ್ಥೆಗಳು ಕ್ಷೇತ್ರಮಟ್ಟದ ಅಭಿವೃದ್ಧಿ ಬಾಕಿ ಕಾಮಗಾರಿಗಳ ಡೇಟಾವನ್ನು ಆಧರಿಸಿ ಸಂಸದರಿಗೆ ಸಲಹೆ ನೀಡುತ್ತವೆ. ಈ ಡೇಟಾವನ್ನು ಕದ್ದುಕೊಂಡಿದ್ದಾರೆ ಎಂಬುದು ಮಮತಾ ಬ್ಯಾನರ್ಜಿ ಅವರ ಆರೋಪ.

ಇನ್ನೊಂದೆಡೆ, ಕೇಂದ್ರ ಸರ್ಕಾರ ಡಿಜಿಟಲ್ ಪೋರ್ಟಲ್ ಮೂಲಕ ಸಂಸದರ ನಿಧಿಯ ಮೇಲೆ ಹೆಚ್ಚಿನ ಹಿಡಿತ ಸಾಧಿಸುತ್ತಿದೆ ಎಂಬ ಆತಂಕವನ್ನು ರಾಜ್ಯ ಸರ್ಕಾರಗಳು ವ್ಯಕ್ತಪಡಿಸುತ್ತಿವೆ. ಬಿಜೆಪಿ ಮಾತ್ರ, “ಇದು ಪಾರದರ್ಶಕತೆಗಾಗಿ ತೆಗೆದುಕೊಂಡ ಕ್ರಮ” ಎಂದು ಸಮರ್ಥಿಸಿಕೊಳ್ಳುತ್ತಿದೆ.

ಅಭಿವೃದ್ಧಿಗೆ ಧಕ್ಕೆ ಬೀಳಬಾರದು

ಸಂಸದರ ನಿಧಿ ಜನರ ತೆರಿಗೆ ಹಣವಾಗಿದೆ. ಒಬ್ಬ ಸಂಸದ ತನ್ನ ಐದು ವರ್ಷಗಳ ಅವಧಿಯಲ್ಲಿ ಸರಾಸರಿ 25 ಕೋಟಿ ರೂಪಾಯಿಗಳಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಅವಕಾಶ ಹೊಂದಿರುತ್ತಾರೆ. ರಾಜಕೀಯ ಸಂಘರ್ಷಗಳು, ಕೇಂದ್ರ–ರಾಜ್ಯ ವಾಗ್ವಾದಗಳ ನಡುವೆಯೂ, ನಿಧಿ ಬಳಕೆಯಾಗದೆ ಉಳಿದರೆ ಅಂತಿಮವಾಗಿ ನಷ್ಟ ಅನುಭವಿಸುವವರು ಕ್ಷೇತ್ರದ ಜನರೇ.

ಪೋರ್ಟಲ್‌ನ ತಾಂತ್ರಿಕ ದೋಷವಾಗಲಿ ಅಥವಾ ಸಂಸದರ ಇಚ್ಛಾಶಕ್ತಿಯ ಕೊರತೆಯಾಗಲಿ—ಯಾವ ಕಾರಣವೇ ಇರಲಿ, ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳಬಾರದು ಎಂಬುದು ಸಾರ್ವಜನಿಕರ ನಿರೀಕ್ಷೆ. ಡಿಜಿಟಲ್ ಪೋರ್ಟಲ್ ಮೂಲಕ ಜನರು ಈಗ ತಮ್ಮ ಸಂಸದನ ನಿಧಿ ಬಳಕೆಯ ‘ರಿಪೋರ್ಟ್ ಕಾರ್ಡ್’ ವೀಕ್ಷಿಸುವ ಹಂತಕ್ಕೆ ಬಂದಿದ್ದು, ಇದು ಪಾರದರ್ಶಕ ಆಡಳಿತದತ್ತ ಒಂದು ಮಹತ್ವದ ಹೆಜ್ಜೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News