×
Ad

Uttar Pradesh | ಶಾಸಕ ಅಬ್ಬಾಸ್ ಅನ್ಸಾರಿಗೆ ಮಧ್ಯಂತರ ಜಾಮೀನು ಮಂಜೂರು ದೃಢಪಡಿಸಿದ 'ಸುಪ್ರೀಂ'

Update: 2026-01-13 20:36 IST

ಅಬ್ಬಾಸ್ ಅನ್ಸಾರಿ(X \ @AbbasAnsari_) , ಸುಪ್ರೀಂ ಕೋರ್ಟ್(PTI)

ಹೊಸದಿಲ್ಲಿ, ಜ. 13: ಉತ್ತರಪ್ರದೇಶದ ಗ್ಯಾಂಗ್‌ಸ್ಟರ್ಸ್ ಕಾಯ್ದೆ (ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಅಡಿ ದಾಖಲಾದ ಪ್ರಕರಣದಲ್ಲಿ ದಿವಂಗತ ಗ್ಯಾಂಗ್‌ಸ್ಟರ್ ಮುಖ್ತರ್ ಅನ್ಸಾರಿ ಪುತ್ರ, ಉತ್ತರಪ್ರದೇಶದ ಶಾಸಕ ಅಬ್ಬಾಸ್ ಅನ್ಸಾರಿಗೆ ಈ ಹಿಂದೆ ಮಂಜೂರು ಮಾಡಿದ ಮಧ್ಯಂತರ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ದೃಢಪಡಿಸಿದೆ.

ಸುಲಿಗೆ ಹಾಗೂ ಹಲ್ಲೆ ಆರೋಪದಲ್ಲಿ ಅನ್ಸಾರಿ ಹಾಗೂ ಇತರರ ವಿರುದ್ಧ ಉತ್ತರಪ್ರದೇಶ ಗ್ಯಾಂಗ್‌ಸ್ಟರ್ಸ್ ಹಾಗೂ ಸಮಾಜವಿರೋಧಿ ಚಟುವಟಿಕೆ (ತಡೆ) ಕಾಯ್ದೆ, 1986ರ ಅಡಿಯಲ್ಲಿ ಚಿತ್ರಕೂಟ ಜಿಲ್ಲೆಯ ಕೊಟ್ವಾಲಿ ಕಾರ್ವಿ ಪೊಲೀಸ್ ಠಾಣೆಯಲ್ಲಿ 2024ರ ಆಗಸ್ಟ್ 31ರಂದು ಎಫ್‌ಐಆರ್ ದಾಖಲಿಸಲಾಗಿತ್ತು.

ಈ ಪ್ರಕರಣದಲ್ಲಿ ಕಳೆದ ವರ್ಷ ಮಾರ್ಚ್ 7ರಂದು ಸುಪ್ರೀಂ ಕೋರ್ಟ್ ಅನ್ಸಾರಿಗೆ ಆರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು.

ಮಂಗಳವಾರ ಅನ್ಸಾರಿ ಪರ ಹಾಜರಾದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಹಾಗೂ ನ್ಯಾಯವಾದಿ ನಿಝಾಮ್ ಪಾಶಾ ಅವರ ಪ್ರತಿಪಾದನೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್‌ಮಲ್ಯಾ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನು ಒಳಗೊಂಡ ಪೀಠ ಗಮನಕ್ಕೆ ತೆಗೆದುಕೊಂಡು, ಪ್ರಕರಣದಲ್ಲಿ ಈ ಹಿಂದೆ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ಕ್ರಮಬದ್ಧಗೊಳಿಸಿತು.

ಮಾರ್ಚ್ 25ರಂದು ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಜಾಮೀನು ಅನ್ಸಾರಿ ಕಸ್ಗಂಜ್ ಕಾರಾಗೃಹದಿಂದ ಬಿಡುಗಡೆಯಾಗಲು ದಾರಿ ಮಾಡಿಕೊಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News