×
Ad

ನೋಯ್ಡಾ ಎಕ್ಸ್‌ಪ್ರೆಸ್‌ ವೇನಲ್ಲಿ ದಟ್ಟ ಮಂಜು | ಸರಣಿ ಅಪಘಾತ, ಹಲವರಿಗೆ ಗಾಯ

Update: 2025-12-13 13:51 IST

Screengrab:X/@PTI_News

ನೋಯ್ಡಾ: ದಿಲ್ಲಿ–ಎನ್‌ಸಿಆರ್ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ನೋಯ್ಡಾ ಎಕ್ಸ್‌ಪ್ರೆಸ್‌ ವೇಯಲ್ಲಿ ಕಾರುಗಳು ಹಾಗೂ ಲಾರಿಗಳು ಸೇರಿ ಡಝನ್‌ ಗೂ ಹೆಚ್ಚು ವಾಹನಗಳು ಪರಸ್ಪರ ಢಿಕ್ಕಿ ಹೊಡೆದಿವೆ. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ಎಕ್ಸ್‌ಪ್ರೆಸ್‌ ವೇ ಯಲ್ಲಿ ಕೆಲಕಾಲ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು ಎಂದು ತಿಳಿದು ಬಂದಿದೆ.

ಪೂರ್ವ ಪೆರಿಫೆರಲ್ (ಕುಂಡ್ಲಿ–ಗಾಝಿಯಾಬಾದ್–ಪಲ್ವಾಲ್) ಎಕ್ಸ್‌ಪ್ರೆಸ್‌ ವೇ ಭಾಗದಲ್ಲಿ ಈ ಸರಣಿ ಅಪಘಾತ ಸಂಭವಿಸಿದೆ. ಬೆಳಗಿನ ವೇಳೆ ಗೋಚರತೆ ತೀವ್ರವಾಗಿ ಕಡಿಮೆಯಾಗಿದ್ದರಿಂದ ವಾಹನಗಳು ಒಂದರ ಹಿಂದೆ ಒಂದು ಢಿಕ್ಕಿ ಹೊಡೆದಿವೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಪಘಾತ ಸ್ಥಳದಲ್ಲಿ ಕೆಲವು ಕಾರುಗಳು ರಸ್ತೆ ವಿಭಜಕದ ಮೇಲೆ ಹತ್ತಿದ್ದು, ಮತ್ತೊಂದು ಕಾರು ಲಾರಿಯ ಅಡಿಯಲ್ಲಿ ಸಿಲುಕಿರುವುದು ಕಂಡುಬಂದಿದೆ.

ಮಾಹಿತಿ ಪಡೆದ ತಕ್ಷಣ ಪೊಲೀಸರು ಹಾಗೂ ಟೋಲ್ ನಿರ್ವಹಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕ್ರೇನ್‌ ಗಳ ಸಹಾಯದಿಂದ ಹಾನಿಗೊಳಗಾದ ವಾಹನಗಳನ್ನು ತೆರವುಗೊಳಿಸಿದರು. ಗೌತಮ್ ಬುದ್ಧ ನಗರ (ನೋಯ್ಡಾ) ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಸ್ಥಳದಲ್ಲಿದ್ದು ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದಕದಾರೆ ಎಂದು ತಿಳಿದು ಬಂದಿದೆ.

ಅಪಘಾತಕ್ಕೀಡಾದ ವಾಹನಗಳ ಹಾಗೂ ಗಾಯಾಳುಗಳ ನಿಖರ ಸಂಖ್ಯೆಯನ್ನು ಪೊಲೀಸರು ಇನ್ನೂ ಪ್ರಕಟಿಸಿಲ್ಲ. ದಟ್ಟ ಮಂಜಿನ ಪರಿಣಾಮ ದಿಲ್ಲಿ–ಎನ್‌ಸಿಆರ್‌ ನಲ್ಲಿ ವಾಯು ಗುಣಮಟ್ಟವೂ ತೀವ್ರವಾಗಿ ಕುಸಿದಿದ್ದು, ನೋಯ್ಡಾ ಸೆಕ್ಟರ್–125ರಲ್ಲಿ ಮಧ್ಯಾಹ್ನ 12ಕ್ಕೆ ‘ತೀವ್ರ’ ವರ್ಗದ 449 ಎಕ್ಯೂಐ ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ಮಂಜಿನ ಹಿನ್ನೆಲೆಯಲ್ಲಿ ಗೌತಮ್ ಬುದ್ಧ ನಗರ ಸಂಚಾರ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ವೇಗ ಮಿತಿಗಳನ್ನು ವಿಧಿಸಿದ್ದಾರೆ. ಯಮುನಾ ಎಕ್ಸ್‌ಪ್ರೆಸ್‌ ವೇಯಲ್ಲಿ ಲಘು ವಾಹನಗಳಿಗೆ ಗಂಟೆಗೆ 75 ಕಿ.ಮೀ ಮತ್ತು ಭಾರೀ ವಾಹನಗಳಿಗೆ 60 ಕಿ.ಮೀ, ನೋಯ್ಡಾ–ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ ವೇಯಲ್ಲಿ ಲಘು ವಾಹನಗಳಿಗೆ 75 ಕಿ.ಮೀ ಹಾಗೂ ಭಾರೀ ವಾಹನಗಳಿಗೆ 50 ಕಿ.ಮೀ ವೇಗ ಮಿತಿ ನಿಗದಿಯಾಗಿದೆ. ನೋಯ್ಡಾ ಎಲಿವೇಟೆಡ್ ರಸ್ತೆಯಲ್ಲಿ ಲಘು ವಾಹನಗಳಿಗೆ 50 ಕಿ.ಮೀ ಮತ್ತು ಭಾರೀ ವಾಹನಗಳಿಗೆ 40 ಕಿ.ಮೀ ವೇಗ ಮಿತಿ ಜಾರಿಯಲ್ಲಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News