ಮುಂಬೈ: ‘ದಹಿ ಹಂಡಿ’ ವೇಳೆ ಸಂಚಾರಿ ನಿಯಮ ಉಲ್ಲಂಘಿಸಿದ 10 ಸಾವಿರ ವಾಹನಗಳಿಗೆ 1 ಕೋಟಿ ರೂಪಾಯಿ ದಂಡ!
PC : PTI
ಮುಂಬೈ, ಆ. 17: ನಗರದಲ್ಲಿ ನಡೆದ ‘ದಹಿ ಹಂಡಿ’ ಉತ್ಸವದ ಸಂದರ್ಭ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದಕ್ಕಾಗಿ ಮುಂಬೈ ಪೊಲೀಸರು 10 ಸಾವಿರಕ್ಕೂ ಅಧಿಕ ವಾಹನಗಳಿಗೆ 1 ಕೋಟಿ ರೂ.ಗೂ ಅಧಿಕ ದಂಡ ವಿಧಿಸಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಠಮಿಯ ಹಿನ್ನೆಲೆಯಲ್ಲಿ ಶನಿವಾರ ‘ದಹಿ ಹಂಡಿ’ ಉತ್ಸವ ಆಯೋಜಿಸಲಾಗಿತ್ತು. ಪುರುಷರು ಹಾಗೂ ಮಹಿಳೆಯರನ್ನು ಒಳಗೊಂಡ ದೊಡ್ಡ ಸಂಖ್ಯೆಯ ತಂಡ ‘ದಹಿ ಹಂಡಿ’ಯನ್ನು ಒಡೆಯಲು ಮಾನವ ಪಿರೆಮಿಡ್ ಅನ್ನು ರಚಿಸುವ ಮೂಲಕ ಪ್ರಯತ್ನಿಸಿತ್ತು.
ಉತ್ಸವದ ಸಂದರ್ಭ ಹಲವು ಸ್ಪರ್ಧಿಗಳು ಗುಂಪಾಗಿ ದ್ವಿಚಕ್ರ ವಾಹನಗಳಲ್ಲಿ ಹಾಗೂ ಇತರ ವಾಹನಗಳಲ್ಲಿ ಸಂಚರಿಸಿದ್ದರು.
ಸುಗಮ ವಾಹನ ಸಂಚಾರಕ್ಕೆ ಸ್ಥಳೀಯ ಪೊಲೀಸರೊಂದಿಗೆ ರಸ್ತೆಯಲ್ಲಿ ನಿಂತಿದ್ದ ಸಂಚಾರಿ ಪೊಲೀಸರು ನಿಯಮಗಳನ್ನು ಉಲ್ಲಂಘಿಸಿದ ವಾಹನಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಹಾಗೂ ದಂಡ ವಿಧಿಸಿದ್ದಾರೆ.
ಹೆಲ್ಮೆಟ್ ಇಲ್ಲದೆ, ಚಾಲನೆ, ರಾಂಗ್ ಸೈಡ್ ಚಾಲನೆ, ತ್ರಿಬಲ್ ರೈಡಿಂಗ್ ಹಾಗೂ ಅತಿಯಾದ ವೇಗದ ಚಾಲನೆಯ ಅಪರಾಧಗಳಿಗೆ ಒಟ್ಟು 10,051 ವಾಹನಗಳಿಗೆ ರೂ. 1,13,57,250 ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿವಿಧ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಮುಂದುವರಿದಿದೆ. ಉಲ್ಲಂಘನೆ ಕಂಡು ಬಂದಲ್ಲಿ ಇನ್ನಷ್ಟು ವಾಹನಗಳಿಗೆ ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.