ಮುಂಬೈನಲ್ಲಿ ಧಾರಾಕಾರ ಮಳೆ: ಸಾರಿಗೆ ಸೇವೆ ಅಸ್ತವ್ಯಸ್ತ
PC : PTI
ಮುಂಬೈ: ಮುಂಬೈನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ನಗರದ ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಹಲವು ರಸ್ತೆಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿವೆ. ಇದು ಸತತ ಮೂರನೆಯ ದಿನ ಸುರಿಯುತ್ತಿರುವ ಧಾರಾಕಾರ ಮಳೆಯಾಗಿದೆ.
ಅಂಧೇರಿ ಸಬ್ ವೇ ಹಾಗೂ ಲೋಖಂಡ್ವಾಲ ಸಂಕೀರ್ಣದಂತಹ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಸಾರಿಗೆ ಸಂಚಾರಕ್ಕೆ ಅಡಚಣೆಯುಂಟಾಗಿದೆ.
ಮುಂಬೈನ ಜೀವನಾಡಿಯಾದ ಲೋಕಲ್ ಟ್ರೈನ್ ಸೇವೆಗೂ ಧಾರಾಕಾರ ಮಳೆಯಿಂದಾಗಿ ಅಡ್ಡಿಯುಂಟಾಗಿದ್ದು, 10 ನಿಮಿಷ ತಡವಾಗಿ ತನ್ನ ಸಂಚಾರ ಸೇವೆ ಪ್ರಾರಂಭಿಸಿದೆ. ಆದರೆ, ಲೋಕಲ್ ಟ್ರೈನ್ ಸೇವೆಗಳನ್ನು ರದ್ದುಪಡಿಸಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಧಾರಾಕಾರ ಮಳೆಯಿಂದಾಗಿ ವೈಮಾನಿಕ ಸೇವೆಗಳೂ ಅಸ್ತವ್ಯವಸ್ತಗೊಂಡಿದ್ದು, ಮುಂಬೈ ವಿಮಾನ ನಿಲ್ದಾಣದತ್ತ ಹಾದು ಹೋಗುವ ಕೆಲ ರಸ್ತೆಗಳು ಜಲಾವೃತಗೊಂಡಿರುವುದರಿಂದ, ವಿಮಾನ ನಿಲ್ದಾಣದತ್ತ ಪ್ರಯಾಣಿಸಲಿರುವ ಪ್ರಯಾಣಿಕರು ಸಾಕಷ್ಟು ಸಮಯಾವಕಾಶವನ್ನು ಹೊಂದಿಸಿಕೊಂಡು ಈ ಮಾರ್ಗಗಳಲ್ಲಿ ಸಂಚರಿಸಬೇಕು ಎಂದು ಅಲಾಸ್ಕಾ ಏರ್ ಹಾಗೂ ಇಂಡಿಗೊ ವಿಮಾನ ಯಾನ ಸಂಸ್ಥೆಗಳು ತನ್ನ ಪ್ರಯಾಣಿಕರಿಗೆ ಸಲಹಾಸೂಚಿ ಬಿಡುಗಡೆ ಮಾಡಿವೆ.