×
Ad

ಮುಂಬೈಯಲ್ಲಿ ಭಾರೀ ಮಳೆ| ಮಾರ್ಗಮಧ್ಯೆ ಕೆಟ್ಟು ನಿಂತ ಮೊನೊ ರೈಲು

200ಕ್ಕೂ ಅಧಿಕ ಪ್ರಯಾಣಿಕರ ರಕ್ಷಣೆ

Update: 2025-08-19 22:04 IST

PC : NDTV 

ಮುಂಬೈ: ಮುಂಬೈನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಸೃಷ್ಟಿಸಿರುವ ಅವಾಂತರದ ಜೊತೆಗೆ ಚೆಂಬೂರ್ ಹಾಗೂ ಭಕ್ತಿ ಪಾರ್ಕ್ ನಿಲ್ದಾಣಗಳ ನಡುವೆ ಭಾರಿ ಜನದಟ್ಟಣೆಯ ಕಾರಣಕ್ಕೆ ಮೊನೊ ರೈಲೊಂದು ಕೆಟ್ಟು ನಿಂತಿದ್ದರಿಂದ ಮುಂಬೈ ನಿವಾಸಿಗಳು ಮತ್ತಷ್ಟು ಪ್ರಯಾಸಕ್ಕೀಡಾದ ಘಟನೆ ನಡೆದಿದೆ. ಈ ಘಟನೆಯಲ್ಲಿ ಕೆಟ್ಟು ನಿಂತ ಮೊನೊ ರೈಲಿನಿಂದ ಕನಿಷ್ಠ 200 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, “ಎಲ್ಲ ಪ್ರಯಾಣಿಕರನ್ನೂ ಸುರಕ್ಷಿತವಾಗಿ ತೆರವುಗೊಳಿಸಲಾಗುವುದು ಹಾಗೂ ಈ ಘಟನೆಯ ಕುರಿತು ತನಿಖೆ ನಡೆಸಲಾಗುವುದು” ಎಂದು ಭರವಸೆ ನೀಡಿದ್ದಾರೆ.

“ಕೆಲ ತಾಂತ್ರಿಕ ಕಾರಣಗಳಿಂದ ಮೊನೊ ರೈಲು ಚೆಂಬೂರ್ ಹಾಗೂ ಭಕ್ತಿ ಪಾರ್ಕ್ ನಿಲ್ದಾಣಗಳ ನಡುವೆ ಸಿಲುಕಿಕೊಂಡಿದೆ. ಸುದ್ದಿ ತಿಳಿಯುತ್ತಿದ್ದಂತೆಯೆ, ಮುಂಬೈ ಮೆಟ್ರೊಪಾಲಿಟನ್ ರೀಜನ್ ಡೆವೆಲಪ್ ಮೆಂಟ್ ಅಥಾರಿಟಿ, ಅಗ್ನಿ ಶಾಮಕ ದಳ ಹಾಗೂ ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಸಂಸ್ಥೆಗಳೂ ಸ್ಥಳಕ್ಕೆ ತಲುಪಿವೆ. ಎಲ್ಲ ಪ್ರಯಾಣಿಕರ ಸುರಕ್ಷತೆಗೆ ಅತಿ ಹೆಚ್ಚಿನ ಆದ್ಯತೆ ನೀಡಲಾಗುವುದು” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಜನರು ಆತಂಕಕ್ಕೀಡಾಗಬಾರದು ಎಂದು ಮನವಿ ಮಾಡಿರುವ ದೇವೇಂದ್ರ ಫಡ್ನವಿಸ್, ಎಲ್ಲ ಪ್ರಯಾಣಿಕರನ್ನೂ ಸುರಕ್ಷಿತವಾಗಿ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ರೈಲಿನಲ್ಲಿ ಸುಮಾರು 200 ಪ್ರಯಾಣಿಕರಿದ್ದರು ಎಂದು ಮಹಾನಗರ ಪಾಲಿಕೆ ಆಯುಕ್ತ ಭೂಷಣ್ ಗಗ್ರಾನಿ ದೃಢಪಡಿಸಿದ್ದಾರೆ.

ಮುಂಬೈನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ, ಲೋಕಲ್ ಟ್ರೈನ್ ಸೇವೆಗಳನ್ನು ಅಮಾನತುಗೊಳಿಸಿರುವುದರಿಂದ, ಮೊನೊರೈಲಿನಲ್ಲಿ ತೀವ್ರ ಜನದಟ್ಟಣೆಯುಂಟಾಗಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News