×
Ad

ಮುಂಬೈ | ಕೊಲಂಬೋದಿಂದ ಆಗಮಿಸಿದ ಮಹಿಳೆಯಿಂದ 47 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ವಶ; ಐವರ ಬಂಧನ

Update: 2025-11-01 20:22 IST

Photo Credit : NDTV 

ಮುಂಬೈ,ನ.1: ಕೊಲಂಬೋದಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳಾ ಪ್ರಯಾಣಿಕಳೋರ್ವಳಿಂದ 47 ಕೋಟಿ ರೂಪಾಯಿ ಮೌಲ್ಯದ 4.7 ಕೆ.ಜಿ. ಕೊಕೇನ್ ವಶಪಡಿಸಿಕೊಂಡಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದ(ಡಿಆರ್‌ಐ) ಅಧಿಕಾರಿಗಳು ಐವರನ್ನು ಬಂಧಿಸಿದ್ದಾರೆ ಎಂದು ವಿತ್ತ ಸಚಿವಾಲಯವು ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.

ಡಿಆರ್‌ಐ ಅಧಿಕಾರಿಗಳು ಮಹಿಳೆಯನ್ನು ತಡೆದು ಆಕೆಯ ಬ್ಯಾಗೇಜ್‌ನ್ನು ವಿವರವಾಗಿ ತಪಾಸಣೆ ನಡೆಸಿದಾಗ ಕಾಫಿ ಪ್ಯಾಕೆಟ್‌ ಗಳಲ್ಲಿ ಅಡಗಿಸಿಟ್ಟಿದ್ದ ಬಿಳಿಯ ಹುಡಿಯಿದ್ದ ಒಂಭತ್ತು ಕಿರುಚೀಲಗಳು ಪತ್ತೆಯಾಗಿದ್ದವು. ಎನ್‌ಡಿಪಿಎಸ್ ಫೀಲ್ಡ್ ಕಿಟ್‌ ನಿಂದ ನಡೆಸಲಾದ ಪರೀಕ್ಷೆಯು ಬಿಳಿಯ ಹುಡಿ ಕೊಕೇನ್ ಎನ್ನುವುದನ್ನು ದೃಢಪಡಿಸಿದೆ ಎಂದು ಅದು ತಿಳಿಸಿದೆ.

ಮಹಿಳೆಯ ಜೊತೆಗೆ ಮಾದಕ ದ್ರವ್ಯ ಜಾಲಕ್ಕೆ ಸೇರಿದ ಇನ್ನೂ ನಾಲ್ವರನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ. ಈ ಪೈಕಿ ಓರ್ವ ಕೊಕೇನ್ ಸ್ವೀಕರಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದರೆ, ಇತರ ಮೂವರು ಹಣಕಾಸು, ಲಾಜಿಸ್ಟಿಕ್ಸ್ ಮತ್ತು ಕಳ್ಳಸಾಗಣೆ ಮಾಡಲಾದ ಮಾದಕ ದ್ರವ್ಯ ವಿತರಣಾ ಜಾಲದೊಂದಿಗೆ ಗುರುತಿಸಿಕೊಂಡಿದ್ದಾರೆ.

ಎಲ್ಲ ಐವರು ಆರೋಪಿಗಳನ್ನು ಎನ್‌ಡಿಪಿಎಸ್ ಕಾಯ್ದೆ, 1985ರಡಿ ಬಂಧಿಸಲಾಗಿದೆ ಎಂದು ತಿಳಿಸಿರುವ ಹೇಳಿಕೆಯು, ಡಿಆರ್‌ಐ ನಡೆಸಿದ ಇತ್ತೀಚಿನ ಕೆಲವು ಕಾರ್ಯಾಚರಣೆಗಳು ಅಂತರರಾಷ್ಟ್ರೀಯ ಮಾದಕ ದ್ರವ್ಯ ಜಾಲಗಳು ಭಾರತೀಯ ಮಹಿಳೆಯರನ್ನು ಸಾಗಣೆಗಾಗಿ ಹೆಚ್ಚಾಗಿ ಬಳಸಿಕೊಳ್ಳುತ್ತಿರುವ ಕಳವಳಕಾರಿ ಪ್ರವೃತ್ತಿಯನ್ನು ಸೂಚಿಸಿವೆ. ಆಹಾರ ಪದಾರ್ಥಗಳು ಮತ್ತು ದಿನನಿತ್ಯದ ಖಾದ್ಯ ವಸ್ತುಗಳಲ್ಲಿ ಮಾದಕ ದ್ರವ್ಯಗಳನ್ನು ಅಡಗಿಸಿ ಸಾಗಿಸಲಾಗುತ್ತಿದೆ ಎಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News