×
Ad

ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ: ʼರಸಮಲೈʼ ಹಂಚುವ ಮೂಲಕ ರಾಜ್ ಠಾಕ್ರೆಗೆ ತಿರುಗೇಟು ನೀಡಿದ ಬಿಜೆಪಿ

Update: 2026-01-16 22:39 IST

ರಾಜ್ ಠಾಕ್ರೆ | Photo Credit : PTI 

ಮುಂಬೈ: ತಮಿಳುನಾಡು ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈರನ್ನು ‘ರಸಮಲೈ’ ಎಂದು ವ್ಯಂಗ್ಯವಾಡಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆಗೆ ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿನ ಜಯಭೇರಿಯ ಬಳಿಕ ರಸಮಲೈ ಸಿಹಿ ತಿನಿಸಿನ ಫೋಟೊ ಹಂಚಿಕೊಳ್ಳುವ ಮೂಲಕ ಬಿಜೆಪಿ ತಿರುಗೇಟು ನೀಡಿದೆ.

ಈ ಕುರಿತು ಎಕ್ಸ್‌ನಲ್ಲಿ ರಸಮಲೈ ಫೋಟೊ ಹಂಚಿಕೊಂಡಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್, “ಒಂದಿಷ್ಟು ರಸಮಲೈಗೆ ಆರ್ಡರ್ ಮಾಡಿದೆ. "#BMCResults” ಎಂದು ಅವರು ಈ ಫೋಟೊಗೆ ಶೀರ್ಷಿಕೆ ನೀಡಿದ್ದಾರೆ. ಆ ಮೂಲಕ ರಾಜ್ ಠಾಕ್ರೆಗೆ ತಿರುಗೇಟು ನೀಡಿದ್ದಾರೆ.

ಮುಂಬೈನಲ್ಲಿ ಆಯೋಜನೆಗೊಂಡಿದ್ದ ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕ ಕೆ.ಅಣ್ಣಾಮಲೈ, ಮುಂಬೈ ಅನ್ನು ಅಂತಾರಾಷ್ಟ್ರೀಯ ನಗರ ಎಂದು ಬಣ್ಣಿಸಿದ್ದರು. ಈ ಹೇಳಿಕೆಯನ್ನು ಮಹಾರಾಷ್ಟ್ರದ ಪ್ರಾದೇಶಿಕ ಪಕ್ಷಗಳು ಚುನಾವಣಾ ಆಯುಧವನ್ನಾಗಿ ಬಳಸಿಕೊಂಡಿದ್ದವು. ಶಿವಸೇನೆ (ಉದ್ಧವ್ ಬಣ) ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಜಂಟಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ರಾಜ್ ಠಾಕ್ರೆ, ಮುಂಬೈ ಕುರಿತು ಹೇಳಿಕೆ ನೀಡುವ ಅಣ್ಣಾಮಲೈ ಅಧಿಕಾರವನ್ನು ಪ್ರಶ್ನಿಸಿದ್ದರು ಹಾಗೂ ಅವರನ್ನು ‘ರಸಮಲೈ’ ಎಂದು ವ್ಯಂಗ್ಯವಾಡಿದ್ದರು. “ಲುಂಗಿಯನ್ನು ಕಿತ್ತೆಸೆದು, ಪುಂಗಿಯನ್ನು ಊದಿರಿ” ಎಂಬ ವಿವಾದಾತ್ಮಕ ಹೇಳಿಕೆಯನ್ನೂ ರಾಜ್ ಠಾಕ್ರೆ ನೀಡಿದ್ದರು.

ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಳಿಕ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೆ.ಅಣ್ಣಾಮಲೈ, “ಮುಂಬೈನ ಜನರು ಸ್ಫಟಿಕದಂತೆ ಸ್ಪಷ್ಟವಾಗಿ ಮಾತನಾಡಿದ್ದಾರೆ. ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿನ ಮಹಾಯುತಿ ಮೈತ್ರಿಕೂಟದ ಗೆಲುವು ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡುವ ಆಡಳಿತಕ್ಕೆ ದೊರೆತಿರುವ ಧ್ವನಿಪೂರ್ಣ ಅನುಮೋದನೆಯಾಗಿದೆ” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News