×
Ad

ಮುಂಬೈ | ಅನುಕೂಲಕರ ತೀರ್ಪು ನೀಡಲು 15 ಲಕ್ಷ ರೂ. ಲಂಚದ ಆರೋಪ; ನ್ಯಾಯಾಧೀಶ, ಗುಮಾಸ್ತನ ವಿರುದ್ಧ ಪ್ರಕರಣ ದಾಖಲು

Update: 2025-11-13 16:36 IST

ಸಾಂದರ್ಭಿಕ ಚಿತ್ರ

ಮುಂಬೈ: ಮಝಗಾಂವ್ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ಎಜಾಝುದ್ದೀನ್ ಸಲಾವುದ್ದೀನ್ ಕಾಝಿ ಮತ್ತು ಅದೇ ನ್ಯಾಯಾಲಯದ ಗುಮಾಸ್ತ ಚಂದ್ರಕಾಂತ್ ಹನ್ಮಂತ್ ವಾಸುದೇವ್ ವಿರುದ್ಧ 15 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟು, ಸ್ವೀಕರಿಸಿದ ಆರೋಪದ ಮೇರೆಗೆ ಮುಂಬೈ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಕರಣ ದಾಖಲಿಸಿದೆ.

ಎಸಿಬಿ ಪ್ರಕಟಿಸಿರುವ ಮಾಹಿತಿಯ ಪ್ರಕಾರ, ದೂರುದಾರರ ಪತ್ನಿ 2015ರಲ್ಲಿ ಭೂಮಿ ಕಬಳಿಕೆ ಆರೋಪದ ಕುರಿತು ಬಾಂಬೆ ಹೈಕೋರ್ಟ್‌ಗೆ ದೂರು ನೀಡಿದ್ದರು. 2016ರ ಏಪ್ರಿಲ್‌ ನಲ್ಲಿ ಹೈಕೋರ್ಟ್ ಮೂರನೇ ವ್ಯಕ್ತಿಗಳ ಹಕ್ಕು ರಚನೆ ಮಾಡುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿತ್ತು. ಆಸ್ತಿಯ ಮೌಲ್ಯ 10 ಕೋಟಿ ರೂ.ಗಿಂತ ಕಡಿಮೆ ಇರುವುದರಿಂದ, 2024ರ ಮಾರ್ಚ್‌ನಲ್ಲಿ ಈ ದಾವೆಯನ್ನು ವಾಣಿಜ್ಯ ಮೊಕದ್ದಮೆಯಾಗಿ ಮಝಗಾಂವ್ ಸಿವಿಲ್ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು.

ಈ ವರ್ಷದ ಸೆ. 9ರಂದು ನಡೆದ ವಿಚಾರಣೆ ಸಂದರ್ಭದಲ್ಲಿ, ದೂರುದಾರರನ್ನು ಸಂಪರ್ಕಿಸಿದ ನ್ಯಾಯಾಲಯದ ಗುಮಾಸ್ತ ವಾಸುದೇವ್ ಭೇಟಿಯಾಗುವಂತೆ ಹೇಳಿದರು ಎನ್ನಲಾಗಿದೆ. ಸೆ. 12ರಂದು ಚೆಂಬೂರಿನ ಸ್ಟಾರ್‌ ಬಕ್ಸ್‌ ನಲ್ಲಿ ದೂರುದಾರರೊಂದಿಗೆ ನಡೆದ ಭೇಟಿಯಲ್ಲಿ ಅನುಕೂಲಕರ ಆದೇಶಕ್ಕಾಗಿ ಒಟ್ಟು 25 ಲಕ್ಷ ರೂ. ನೀಡುವಂತೆ ಲಂಚಕ್ಕೆ ಬೇಡಿಕೆಯಿಡಲಾಗಿತ್ತು. ಅದರಲ್ಲೂ 10 ಲಕ್ಷ ರೂ. ತಮಗೆ ಹಾಗೂ 15 ಲಕ್ಷ ರೂ. ನ್ಯಾಯಾಧೀಶರಿಗೆ ಲಂಚ ನೀಡಬೇಕೆಂದು ವಾಸುದೇವ್ ಬೇಡಿಕೆ ಇಟ್ಟಿದ್ದಾರೆಂದು ಎಸಿಬಿ ತಿಳಿಸಿದೆ. ದೂರುದಾರರು ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು.

ಆದರೂ, ಮುಂದಿನ ಹಲವು ವಾರಗಳವರೆಗೆ ಲಂಚ ಕೊಡುವಂತೆ ಬೇಡಿಕೆ ಮುಂದುವರೆದಿತ್ತು. ನಂತರ ದೂರುದಾರರು ನ. 10 ರಂದು ಕಿರುಕುಳ ತಾಳಲಾರದೆ ಎಸಿಬಿಯನ್ನು ಸಂಪರ್ಕಿಸಿದ್ದರು. ಪಂಚ ಸಾಕ್ಷಿಗಳ ಸಮ್ಮುಖದಲ್ಲಿ ನಡೆದ ಪರಿಶೀಲನೆ ವೇಳೆ ವಾಸುದೇವ್ ಬೇಡಿಕೆಯನ್ನು 15 ಲಕ್ಷ ರೂ.ಗೆ ಇಳಿಸಿದರು ಎಂದು ಆರೋಪಿಸಲಾಗಿದೆ.

ನಹ 11ರಂದು ಎಸಿಬಿ ಕಾರ್ಯಾಚರಣೆಯಲ್ಲಿ, ವಾಸುದೇವ್ ದೂರುದಾರರಿಂದ 15 ಲಕ್ಷ ರೂ. ಸ್ವೀಕರಿಸುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಹಣ ಪಡೆದ ಬಳಿಕ ಅವರು ನ್ಯಾಯಾಧೀಶ ಕಾಝಿಗೆ ಫೋನ್ ಮಾಡಿ ಲಂಚ ಸ್ವೀಕರಿಸಿದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ನ್ಯಾಯಾಧೀಶ ಕಾಝಿ ಮತ್ತು ವಾಸುದೇವ್ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ಮತ್ತು 7A ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಬಳಿಕ ನ್ಯಾಯಾಧೀಶ ಕಾಝಿ ಬುಧವಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿಲ್ಲ ಎಂದು barandbench ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News