ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಸೇವೆ ಶೀಘ್ರ ಆರಂಭ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
ಅಶ್ವಿನಿ ಯಾದವ್ | PTI
ಭಾವನಗರ(ಗುಜರಾತ್): ಯೋಜನೆಯ ಕಾಮಗಾರಿಯು ತ್ವರಿತವಾಗಿ ನಡೆಯುತ್ತಿದ್ದು, ಭಾರತದ ಮೊದಲ ಬುಲೆಟ್ ರೈಲು ಸೇವೆ ಶೀಘ್ರವೇ ಆರಂಭಗೊಳ್ಳಲಿದೆ ಮತ್ತು ಅದು ಮುಂಬೈ-ಅಹ್ಮದಾಬಾದ್ ನಡುವೆ ಪ್ರಯಾಣದ ಅವಧಿಯನ್ನು ಎರಡು ಗಂಟೆ ಏಳು ನಿಮಿಷಗಳಿಗೆ ತಗ್ಗಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರವಿವಾರ ತಿಳಿಸಿದರು.
ಭಾವನಗರ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದ ಅವರು ಅಯೋಧ್ಯಾ ಎಕ್ಸ್‌ಪ್ರೆಸ್‌ಗೆ ವರ್ಚುವಲ್ ಆಗಿ ಚಾಲನೆ ನೀಡಿ ಮಾತನಾಡುತ್ತಿದ್ದರು. ಇದೇ ವೇಳೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ರೇವಾ-ಪುಣೆ ಎಕ್ಸ್‌ಪ್ರೆಸ್ ಮತ್ತು ಛತ್ತೀಸ್‌ಗಡ ಮುಖ್ಯಮಂತ್ರಿ ವಿಷ್ಣು ದೇವ ಸಾಯಿ ಅವರು ಜಬಲ್ಪುರ-ರಾಯಪುರ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು.
ಮುಂಬೈ-ಅಹ್ಮದಾಬಾದ್ ನಡುವಿನ ಭಾರತದ ಮೊದಲ ಬುಲೆಟ್ ರೈಲು 508 ಕಿ.ಮೀ.ಗಳ ಅಂತರವನ್ನು ಕ್ರಮಿಸಲಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್(ಬಿಕೆಸಿ) ಪ್ರದೇಶದಿಂದ ಪ್ರಯಾಣವನ್ನು ಆರಂಭಿಸುವ ಅದು ಪ್ರತಿ ಗಂಟೆಗೆ 320 ಕಿ.ಮೀ.ವೇಗದಲ್ಲಿ ಚಲಿಸಲಿದ್ದು,ಗುಜರಾತಿನ ವಾಪಿ, ಸೂರತ್, ವಡೋದರಾ ಮತ್ತು ಅಹ್ಮದಾಬಾದ್‌ಗಳಿಗೆ ಸಂಪರ್ಕ ಕಲ್ಪಿಸಲಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ವೈಷ್ಣವ ಪೋರಬಂದರ್ ಮತ್ತು ರಾಜಕೋಟ್ ನಡುವೆ ನೂತನ ರೈಲು ಸಂಚಾರ, ರಾಣಾವಾವ್ ನಿಲ್ದಾಣದಲ್ಲಿ 135 ಕೋಟಿ ರೂ.ವೆಚ್ಚದ ಕೋಚ್ ನಿರ್ವಹಣೆ ಸೌಲಭ್ಯ, ಪೋರಬಂದರ್ ನಗರದಲ್ಲಿ ರೈಲ್ವೆ ಫ್ಲೈಓವರ್ ನಿರ್ಮಾಣ, ಎರಡು ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳು ಮತ್ತು ಭಾವನಗರದಲ್ಲಿ ತಲೆಯೆತ್ತಲಿರುವ ಬಂದರಿನಲ್ಲಿ ಕಂಟೇನರ್ ಟರ್ಮಿನಲ್ ಸೇರಿದಂತೆ ಗುಜರಾತ್‌ನಲ್ಲಿ ಮಂಬರುವ ರೈಲ್ವೆ ಯೋಜನೆಗಳ ಕುರಿತು ವಿವರಗಳನ್ನು ನೀಡಿದರು. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡಗಳಲ್ಲಿಯೂ ಹಲವಾರು ನೂತನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು,ಇವೆರಡೂ ರಾಜ್ಯಗಳಲ್ಲಿಯ ಡಬಲ್-ಇಂಜಿನ್ ಸರಕಾರಗಳು ಯೋಜನೆಗಳ ತ್ವರಿತ ಪ್ರಗತಿಯನ್ನು ಸಾಧ್ಯವಾಗಿಸಿವೆ ಎಂದರು.
ನರೇಂದ್ರ ಮೋದಿ ಸರಕಾರದ 11 ವರ್ಷಗಳಲ್ಲಿ 34,000 ಕಿ.ಮೀ.ನೂತನ ರೈಲ್ವೆ ಮಾರ್ಗಗಳನ್ನು ಮತ್ತು ದೇಶದಲ್ಲಿ ಪ್ರತಿ ದಿನ 12 ಕಿ.ಮೀ.ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದ ಅವರು,ದೇಶದಲ್ಲಿ 1,300 ರೈಲು ನಿಲ್ದಾಣಗಳನ್ನು ಪುನರ್‌ಅಭಿವೃದ್ಧಿಗೊಳಿಸಲಾಗುತ್ತಿದ್ದು, ಹಿಂದೆಂದೂ ಇಂತಹ ಕಾರ್ಯ ನಡೆದಿರಲಿಲ್ಲ ಎಂದು ಹೇಳಿದರು.