×
Ad

ಮುಂಬೈ | ಅಪಹೃತ 3 ವರ್ಷದ ಬಾಲಕನ ಮೃತದೇಹ ರೈಲಿನ ಶೌಚಾಲಯದ ಕಸದ ಬುಟ್ಟಿಯಲ್ಲಿ ಪತ್ತೆ!

Update: 2025-08-25 20:08 IST

ಸಾಂದರ್ಭಿಕ  ಚಿತ್ರ

ಮುಂಬೈ, ಆ. 25: ಅಪಹರಣಕ್ಕೊಳಗಾದ ಮೂರು ವರ್ಷದ ಬಾಲಕನ ಮೃತದೇಹ ಇಲ್ಲಿನ ಲೋಕಮಾನ್ಯ ತಿಲಕ್ ಟರ್ಮಿನಸ್ (ಎಲ್ಟಿಟಿ)ನಲ್ಲಿ ರೈಲಿನ ಶೌಚಾಲಯದ ಕಸದ ತೊಟ್ಟಿಯಲ್ಲಿ ಶನಿವಾರ ಪತ್ತೆಯಾಗಿದೆ.

ಈ ಬಾಲಕನನ್ನು ಆಕಾಶ್ ಆಲಿಯಾಸ್ ಆರವ್ ಶಾ ಎಂದು ಗುರುತಿಸಲಾಗಿದೆ. ಬಾಲಕ ಆಗಸ್ಟ್ 21ರಂದು ಸೂರತ್ ನ ತನ್ನ ಮನೆಯಿಂದ ನಾಪತ್ತೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅನಂತರ ಬಾಲಕನನ್ನು ಆತನ 26 ವರ್ಷದ ಸೋದರ ಸಂಬಂಧಿ ವಿಕಾಸ್ ಕುಮಾರ್ ಶಾ ಅಪಹರಿಸಿರುವುದಾಗಿ ಹೆತ್ತರವರು ದೂರು ದಾಖಲಿಸಿದ್ದಾರೆ. ಗುಜರಾತ್ ಪೊಲೀಸ್ ಹಾಗೂ ಮುಂಬೈ ಸರಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ಪ್ರಸ್ತುತ ವಿಕಾಸ್ ಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಶನಿವಾರ ಮುಂಜಾನೆ ಕುಶಿನಗರ್ ಎಕ್ಸ್ಪ್ರೆಸ್ ಲೋಕಮಾನ್ಯ ತಿಲಕ್ ಟರ್ಮಿನಸ್ (ಎಲ್ಟಿಟಿ) ಆಗಮಿಸಿತ್ತು. ಪ್ರಯಾಣಿಕರು ಇಳಿದ ಬಳಿಕ ಕಾರ್ಮಿಕರು ಬೋಗಿಗಳನ್ನು ಸ್ವಚ್ಛಗೊಳಿಸಲು ಆರಂಭಿಸಿದರು. ಈ ಸಂದರ್ಭ ಓರ್ವ ಕಾರ್ಮಿಕನಿಗೆ ಬಾಲಕನ ಮೃತದೇಹ ಶೌಚಾಲಯದ ಕಸದ ತೊಟ್ಟಿಯಲ್ಲಿರುವುದು ಕಂಡು ಬಂತು. ಅವರು ಕೂಡಲೇ ರೈಲ್ವೆ ಪೊಲೀಸ್ ರಕ್ಷಣಾ ಪಡೆ (ಆರ್ಪಿಎಫ್) ಹಾಗೂ ಜಿಆರ್ಪಿಗೆ ಮಾಹಿತಿ ನೀಡಿದರು. ಬಾಲಕನ ಮೃತದೇಹವನ್ನು ಮರಣೋತ್ತರ ಕೇಂದ್ರಕ್ಕೆ ತೆಗೆದುಕೊಂಡು ಹೋಗಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲಕನನ್ನು ಕತ್ತು ಕೊಯ್ದು ಹತ್ಯೆಗೈದಿರುವುದು ಬೆಳಕಿಗೆ ಬಂದಿದೆ. ಗುರುತು ಪತ್ತೆ ಹಚ್ಚಲು ಬಾಲಕನ ಭಾವಚಿತ್ರವನ್ನು ಎಲ್ಲಾ ಪೊಲೀಸ್ ಠಾಣೆಗಳಿಗೆ ರವಾನಿಸಲಾಗಿತ್ತು.

ಈ ನಡುವೆ ಗುಜರಾತ್ ಅಮ್ರೋಲಿ ಪೊಲೀಸ್ ಠಾಣೆಯ ತಂಡ ಜಿಆರ್ಪಿಯನ್ನು ಸಂಪರ್ಕಿಸಿತು ಹಾಗೂ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಬಾಲಕ ಕಾಣೆಯಾಗಿರುವುದನ್ನು ದೃಢಪಡಿಸಿತ್ತು.

ಅಮ್ರೋಲಿ ಪೊಲೀಸರ ತನಿಖೆಯಲ್ಲಿ ವಿಕಾಸ್ ಹಾಗೂ ಆಕಾಶ್ ಸೂರತ್ ರೈಲು ನಿಲ್ದಾಣ ತಲುಪಲು ಮೋಟರ್ ಸೈಕಲ್ ಸವಾರನಿಂದ ಲಿಫ್ಟ್ ತೆಗೆದುಕೊಂಡಿರುವುದು ತಿಳಿದು ಬಂದಿದೆ. ಅನಂತರ ಅವರು ದಾದರ್ ತಲುಪಿದ್ದಾರೆ ಹಾಗೂ ಥಾಣೆಗೆ ತೆರಳಿದ್ದಾರೆ ಎಂದು ನಂಬಲಾಗಿದೆ.

ಬಾಲಕನನ್ನು ಎಲ್ಲಿ ಹತ್ಯೆಗೈಯಲಾಯಿತು ಹಾಗೂ ಆತನ ಮೃತದೇಹವನ್ನು ಕುಶಿನಗರ್ ಎಕ್ಸ್‌ಪ್ರೆಸ್ ನಲ್ಲಿ ಹೇಗೆ ಹಾಕಲಾಯಿತು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತದೇಹ ಎಲ್ಲಿ ಪತ್ತೆಯಾಯಿತು ಎಂದು ಪೊಲೀಸರು ರೈಲು ಪ್ರಯಾಣಿಕರು ಹಾಗೂ ಬೋಗಿಯ ಸಹಾಯಕರ ವಿಚಾರಣೆ ನಡೆಸಲಿದ್ದಾರೆ.

ಬಾಲಕನ ಹತ್ಯೆ ಹಿಂದಿನ ಕಾರಣ ಇದುವರೆಗೆ ತಿಳಿದು ಬಂದಿಲ್ಲ. ವಿಕಾಸ್ ನಿರುದ್ಯೋಗಿ ಎಂದು ಆತನ ಕುಟುಂಬ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News