ರೈಲುಗಳಲ್ಲಿ ದಟ್ಟಣೆಯನ್ನು ನಿಭಾಯಿಸಲು ಮುಂಬೈನ ಸರಕಾರಿ ಕಚೇರಿಗಳ ಕಾರ್ಯಾವಧಿ ಬದಲಾವಣೆ?
ಸಾಂದರ್ಭಿಕ ಚಿತ್ರ (PTI)
ಮುಂಬೈ : ಮುಂಬೈ ಮಹಾನಗರದ ಜೀವನಾಡಿಯಾಗಿರುವ ಲೋಕಲ್ ರೈಲುಗಳಲ್ಲಿ ಜನದಟ್ಟಣೆಯನ್ನು ನಿಭಾಯಿಸುವ ಮಹತ್ವದ ಕ್ರಮವೊಂದರಲ್ಲಿ ಮಹಾರಾಷ್ಟ್ರ ಸರಕಾರವು ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸುವುದಾಗಿ ಪ್ರಕಟಿಸಿದೆ.
ಕಚೇರಿ ಸಮಯಗಳಲ್ಲಿ ಬದಲಾವಣೆಗಳನ್ನು ತರಲು ಖಾಸಗಿ ಕಂಪನಿಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಪೀಕ್ ಅವರ್ ದಟ್ಟಣೆಯನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.
ಯೋಜನೆಯನ್ನು ದೃಢಪಡಿಸಿದ ರಾಜ್ಯದ ಸಾರಿಗೆ ಸಚಿವ ಪ್ರತಾಪ ಸರನಾಯಕ್ ಅವರು,ಕಾರ್ಯಪಡೆಯು ಸಾರಿಗೆ ಇಲಾಖೆ,ಭಾರತೀಯ ರೈಲ್ವೆ ಮತ್ತು ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡಿರಲಿದೆ ಎಂದು ತಿಳಿಸಿದರು. ಬೆಳಿಗ್ಗೆ 9ರಿಂದ ಸಂಜೆ 5 ಗಂಟೆವರೆಗಿನ ಸಾಂಪ್ರದಾಯಿಕ ಕೆಲಸದ ಅವಧಿಯ ಬದಲು ಬೆಳಿಗ್ಗೆ 8ರಿಂದ ಸಂಜೆ 4 ಅಥವಾ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯಂತಹ ಕೆಲಸದ ಪಾಳಿಗಳನ್ನು ಜಾರಿಗೊಳಿಸಲು ಈ ಕಾರ್ಯಪಡೆಯು ಖಾಸಗಿ ಕಂಪನಿಗಳೊಂದಿಗೆ ತೊಡಗಿಸಿಕೊಳ್ಳಲಿದೆ.
ಮುಂಬೈ ಉಪನಗರ ರೈಲುಗಳಲ್ಲಿ ಪ್ರತಿದಿನ ಸುಮಾರು 80 ಲಕ್ಷ ಜನರು ಪ್ರಯಾಣಿಸುತ್ತಿದ್ದು,ಬೆಳಿಗ್ಗೆ 8ರಿಂದ 11 ಗಂಟೆ ಮತ್ತು ಸಂಜೆ 5ರಿಂದ ರಾತ್ರಿ 8 ಗಂಟೆ ನಡುವೆ ಅತ್ಯಂತ ಹೆಚ್ಚಿನ ದಟ್ಟಣೆಯಿರುತ್ತದೆ. ವೆಸ್ಟರ್ನ್,ಸೆಂಟ್ರಲ್ ಮತ್ತು ಹಾರ್ಬರ್ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು,ಪೀಕ್ ಅವರ್‌ಗಳಲ್ಲಿ ಪ್ಲಾಟ್‌ಫಾರ್ಮ್‌ಗಳು ಮತ್ತು ರೈಲುಗಳಲ್ಲಿ ನೂಕುನುಗ್ಗಲು ಸಾಮಾನ್ಯವಾಗಿದೆ.
ನೂತನ ಉಪಕ್ರಮವನ್ನು ಪ್ರಾಯೋಗಿಕವಾಗಿ ಆಯ್ದ ಕಂಪನಿಗಳು ಅಥವಾ ಪ್ರದೇಶಗಳಲ್ಲಿ ಆರಂಭಿಸಲಾಗುವುದು ಮತ್ತು ಯಶಸ್ವಿಯಾದರೆ ಅದನ್ನು ನಗರದಾದ್ಯಂತ ವಿಸ್ತರಿಸಬಹುದು. ಕಚೇರಿಗಳಲ್ಲಿ ಬೇರೆ ಬೇರೆ ಪಾಳಿಗಳಲ್ಲಿ ಕೆಲಸಗಳು ನಡೆದರೆ ಸಾರ್ವಜನಿಕ ಸಾರಿಗೆಯ ಮೇಲಿನ ಒತ್ತಡದ ನಿವಾರಣೆ ಮಾತ್ರವಲ್ಲ,ನಿಬಿಡ ಅವಧಿಗಳಲ್ಲಿ ರಸ್ತೆ ಸಂಚಾರ ದಟ್ಟಣೆಯನ್ನೂ ಕಡಿಮೆಗೊಳಿಸಲು ನೆರವಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.