6 ತಿಂಗಳಿನಿಂದ ನಾಪತ್ತೆಯಾಗಿದ್ದ ನಾಲ್ಕು ವರ್ಷದ ಬಾಲಕಿಯನ್ನು ಪೋಷಕರ ಮಡಿಲು ಸೇರಿಸಿದ ಮುಂಬೈ ಪೊಲೀಸರು
ಸಾಂದರ್ಭಿಕ ಚಿತ್ರ | Photo Credit : PTI
ಮುಂಬೈ: ಕಳೆದ ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ನಾಲ್ಕು ವರ್ಷದ ಮುಂಬೈನ ಬಾಲಕಿಯೊಬ್ಬಳನ್ನು ಪೊಲೀಸರು ತನ್ನ ಪೋಷಕರ ಮಡಿಲು ಸೇರಿಸಿದ ಘಟನೆ ನಡೆದಿದೆ.
ಕಳೆದ ಮೇ 20ರಂದು ನಾಲ್ಕು ವರ್ಷದ ಬಾಲಕಿಯೊಬ್ಬಳು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಂದ ನಾಪತ್ತೆಯಾಗಿದ್ದಳು. ತಂದೆಯ ಚಿಕಿತ್ಸೆಗೆಂದು ಸೋಲಾಪುರಕ್ಕೆ ತೆರಳಿದ್ದ ಆಕೆಯ ಪೋಷಕರು ಬರೋಬ್ಬರಿ ಆರು ತಿಂಗಳ ಕಾಲ ಬಾಲಕಿಯ ಬರುವಿಕೆಗಾಗಿ ಶಬರಿಯಂತೆ ಕಾದು ಕುಳಿತಿದ್ದರು. ಅವರ ದೀರ್ಘಕಾಲದ ಕಾಯುವಿಕೆಯನ್ನು ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿರುವ ಮುಂಬೈ ಪೊಲೀಸರು, ಕಳೆದು ಹೋಗಿದ್ದ ಅವರ ನಾಲ್ಕು ವರ್ಷದ ಪುತ್ರಿಯನ್ನು ಅವರೊಂದಿಗೆ ಪುನರ್ಮಿಲನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಮ್ಮ ಪುತ್ರಿ ನಾಪತ್ತೆಯಾದ ನಂತರ, ಆಕೆಯ ಪೋಷಕರು ಆಕೆಯ ಮುರುಟಿ ಹೋದ ಭಾವಚಿತ್ರವನ್ನು ಹಿಡಿದುಕೊಂಡು ಪದೇ ಪದೇ ಆರು ತಿಂಗಳ ಕಾಲ ಪೊಲೀಸ್ ಠಾಣೆಗೆ ಕಾಲು ಸವೆಸಿದ್ದರು. ತಮ್ಮ ಪುತ್ರಿಯೇನಾದರೂ ನಿಮ್ಮ ಕಣ್ಣಿಗೆ ಬಿದ್ದಳೆ ಎಂದು ಅಪರಿಚಿತರನ್ನು ಅಕ್ಷರಶಃ ಬೇಡಿಕೊಂಡಿದ್ದರು. ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶದಾದ್ಯಂತ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಮುಂಬೈನಿಂದ ವಾರಾಣಸಿಯವರೆಗೆ ಆಕೆಯ ಪೋಸ್ಟರ್ ಅನ್ನು ಹಂಚಿಕೊಂಡಿದ್ದ ಅವರು, ಆಕೆಯ ನಾಪತ್ತೆ ಪ್ರಕರಣದ ಕಡತವನ್ನು ಮುಚ್ಚಲು ನಿರಾಕರಿಸಿದ್ದರು.
ಆದರೆ, ಕೊನೆಗೂ ನಾಪತ್ತೆಯಾಗಿದ್ದ ಬಾಲಕಿಯ ಸುಳಿವು ವಾರಾಣಸಿಯಲ್ಲಿ ಪತ್ತೆಯಾಗಿತ್ತು. ಆಕೆಯ ನಾಪತ್ತೆ ಪೋಸ್ಟರ್ ಅನ್ನು ಗಮನಿಸಿದ್ದ ಸ್ಥಳೀಯ ಪತ್ರಕರ್ತರೊಬ್ಬರು ಆ ಪುಟ್ಟ ಬಾಲಕಿಯನ್ನು ವಾರಾಣಸಿಯ ಅನಾಥಶ್ರಮವೊಂದರಲ್ಲಿ ಗುರುತು ಹಚ್ಚಿದ್ದರು. ಇದರ ಬೆನ್ನಿಗೇ, ವಾರಾಣಸಿಗೆ ತೆರಳಿದ್ದ ಮುಂಬೈ ಪೊಲೀಸರು, ಆಕೆಯ ಗುರುತನ್ನು ಪರಿಶೀಲಿಸಿ, ಆರು ತಿಂಗಳ ಕಾಲ ತಮ್ಮ ಪುತ್ರಿ ಜೀವಂತವಾಗಿರಲಿ ಎಂದು ಪ್ರಾರ್ಥಿಸಿದ್ದ ಆಕೆಯ ಪೋಷಕರ ಬಯಕೆಯನ್ನು ಅಕ್ಷರಷಃ ನಿಜವಾಗಿದ್ದರು.
ಬಳಿಕ ಪೊಲೀಸರು ನವೆಂಬರ್ 14ರಂದು (ಮಕ್ಕಳ ದಿನಾಚರಣೆಯಂದು) ಆಕೆಯನ್ನು ಮತ್ತೆ ಮುಂಬೈಗೆ ಮರಳಿ ಕರೆ ತಂದರು. ಆಕೆಯು ಮುಂಬೈಗೆ ಬರುತ್ತಿದ್ದಂತೆಯೇ, ನೇರವಾಗಿ ಓಡಿರುವ ಆಕೆ, ಆಕೆಗಾಗಿ ಹಲವಾರು ತಿಂಗಳಿನಿಂದ ಹುಡುಕಾಟ ನಡೆಸುತ್ತಿದ್ದ ಪೋಷಕರ ತೆಕ್ಕೆಗೆ ಜಾರಿದ್ದಾಳೆ. ಕೆಲವೇ ಕ್ಷಣಗಳಲ್ಲಿ ಹಲವಾರು ತಿಂಗಳ ಭಯ, ನೋವು ಹಾಗೂ ದಣಿವರಿಯದ ಆಶಾವಾದದ ನಂತರ, ಆಕೆ ತಮಗೆ ಮರಳಿ ದೊರೆತದ್ದರಿಂದ ಆಕೆಯ ಪೋಷಕರು ಗದ್ಗದಿತರಾದರು ಎಂದು ತಿಳಿದು ಬಂದಿದೆ.
ಆಕೆಯನ್ನು ಅಪಹರಿಸಿದ್ದ ಅಪಹರಣಕಾರನ ಪತ್ತೆಯಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕಳೆದ ಆರು ತಿಂಗಳಿನಿಂದ ನಾಪತ್ತೆಯಾಗಿದ್ದ ಬಾಲಕಿಗಾಗಿ ಮುಂಬೈ ಪೊಲೀಸರು ದೇಶದಾದ್ಯಂತ ಸಂಚರಿಸಿದ್ದರು.