ಮುಂಬೈ ರೈಲಿನಲ್ಲಿ ಗುಂಡಿನ ದಾಳಿ ಪ್ರಕರಣ | ಆರ್‌ಪಿಎಫ್ ಕಾನ್‌ಸ್ಟೆಬಲ್ ʼಗಡ್ಡಧಾರಿʼ ವ್ಯಕ್ತಿ ಮೇಲೆ 2 ಬಾರಿ ಗುಂಡು ಹಾರಿಸಿದ್ದಾರೆ : ನ್ಯಾಯಾಲಯಕ್ಕೆ ತಿಳಿಸಿದ ಸಾಕ್ಷಿ
Photo | ndtv
ಮುಂಬೈ: ಜುಲೈ 2023ರಲ್ಲಿ ಜೈಪುರ-ಮುಂಬೈ ರೈಲಿನಲ್ಲಿ ನಾಲ್ವರನ್ನು ಹತ್ಯೆಗೈದಿದ್ದ ಆರ್‌ಪಿಎಫ್ ಕಾನ್‌ಸ್ಟೆಬಲ್ ಚೇತನ್ ಸಿಂಗ್ ವಿರುದ್ಧ ಮುಂಬೈ ನ್ಯಾಯಾಲಯವೊಂದಕ್ಕೆ ಹೇಳಿಕೆ ನೀಡಿರುವ ಸಾಕ್ಷಿಯು, ಆರೋಪಿ ಕಾನ್‌ಸ್ಟೆಬಲ್ ಎರಡು ಬಾರಿ ಗುಂಡು ಹಾರಿಸಿದ ನಂತರ, ಗಡ್ಡಧಾರಿ ವ್ಯಕ್ತಿಯೊಬ್ಬರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನಾನು ನೋಡಿದ್ದೇನೆ ಎಂದು ತಿಳಿಸಿದ್ದಾರೆ.
ಗುಂಡಿನ ದಾಳಿ ನಡೆದ ದಿನ ತನ್ನ ಸ್ನೇಹಿತೆಯೊಂದಿಗೆ ರೈಲಿನಲ್ಲಿ ತೆರಳುತ್ತಿದ್ದ 29 ವರ್ಷದ ಸಾಕ್ಷಿಯು, ತನ್ನ ಕಣ್ಣೆದುರು ನಡೆದ ಮಾರಣಾಂತಿಕ ದಾಳಿಯ ಕುರಿತು ನ್ಯಾಯಾಲಯದೆದುರು ಸಾಕ್ಷ್ಯ ನುಡಿದರು.
ಜುಲೈ 31, 2023ರಂದು ಮಹಾರಾಷ್ಟ್ರದ ಪಾಲ್ಘರ್ ರೈಲ್ವೆ ನಿಲ್ದಾಣದಲ್ಲಿ ಜೈಪುರ-ಮುಂಬೈ ಸೆಂಟ್ರಲ್ ಮಾರ್ಗವಾಗಿ ಸಂಚರಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ತನ್ನ ಹಿರಿಯ ಸಹೋದ್ಯೋಗಿ, ಸಹಾಯಕ ಸಬ್ ಇನ್ಸ್ ಪೆಕ್ಟರ್ ಟೀಕಾ ರಾಮ್ ಮೀನಾ ಹಾಗೂ ಇನ್ನಿತರ ಮೂವರು ಪ್ರಯಾಣಿಕರ ಮೇಲೆ ಗುಂಡು ಹಾರಿಸಿದ ಆರೋಪವನ್ನು ಮಾಜಿ ಆರ್‌ಪಿಎಫ್ ಪೊಲೀಸ್ ಕಾನ್‌ಸ್ಟೆಬಲ್ ಚೇತನ್ ಸಿಂಗ್ ಚೌಧರಿ ಎದುರಿಸುತ್ತಿದ್ದಾನೆ. ಕೃತ್ಯಕ್ಕೆ ಸಂಬಂಧಿಸಿ ಆತ ಜೈಲಿನಲ್ಲಿದ್ದಾನೆ. ಇದಾದ ನಂತರ ಆತನನ್ನು ಸೇವೆಯಿಂದಲೂ ವಜಾಗೊಳಿಸಲಾಗಿತ್ತು.
ಬೋರಿವಿಲಿ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವೈ.ಬಿ.ಪಠಾಣ್ ಎದುರ ಹಾಜರಾದ ಸಾಕ್ಷಿಯು, “ನಾನು ಬೆಳಿಗ್ಗೆ ಸುಮಾರು 5.30ಕ್ಕೆ ನಿದ್ರೆಯಿಂದ ಎದ್ದಾಗ ವ್ಯಕ್ತಿಯೊಬ್ಬರು ಪ್ಯಾಂಟ್ರಿ ಕಾರ್ ನಿಂದ ಹೊರಗೆ ಓಡುತ್ತಿರುವುದು, ಅವರ ಹಿಂದೆ ಆರೋಪಿ ಕಾನ್‌ಸ್ಟೆಬಲ್ ಓಡುತ್ತಿರುವುದನ್ನು ಕಂಡೆ. ಏನಾದರೂ ಆಯಿತೆ ಎಂದು ನಾನು ಕಾನ್‌ಸ್ಟೆಬಲ್ ಅನ್ನು ಪ್ರಶ್ನಿಸಿದೆ. ಅದಕ್ಕೆ ಪ್ರತಿಯಾಗಿ ಅವರು ನನ್ನನ್ನು ಸಿಟ್ಟಿನಿಂದ ದುರುಗುಟ್ಟಿಕೊಂಡು ನೋಡಿದರು. ನಾನು ಭಯಭೀತಳಾಗಿ ಮತ್ತೆ ನನ್ನ ಆಸನದಲ್ಲಿ ಆಸೀನಳಾದೆ” ಎಂದು ಹೇಳಿಕೆ ನೀಡಿದರು.
ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದೆದುರು ಹಾಜರುಪಡಿಸಲಾದ ಆರೋಪಿಯನ್ನು ಸಾಕ್ಷಿಯು ಗುರುತಿಸಿದರು.
ಆರೋಪಿ ಚೌಧರಿ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳು, ರೈಲ್ವೆ ಕಾಯ್ದೆ ಹಾಗೂ ಮಹಾರಾಷ್ಟ್ರ ಆಸ್ತಿಪಾಸ್ತಿಗಳ ವಿರೂಪ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.