ಮುನ್ನಾರ್ ಬಳಿಯ 120 ಅಡಿ ಎತ್ತರದ ಸ್ಕೈ ಡೈನಿಂಗ್ ರೆಸ್ಟೋರಂಟ್ ನಲ್ಲಿ ಸಿಕ್ಕಿಹಾಕಿಕೊಂಡ ಪ್ರವಾಸಿಗಳು!
Credit : X/ @Sujitlivenews
ಮುನ್ನಾರ್,ನ.28: ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ಗಿರಿಧಾಮದ ಬಳಿಯ ಅನಚ್ಚಾಲ್ ನ ಸ್ಕೈ ಡೈನಿಂಗ್ ರೆಸ್ಟೋರಂಟ್ ನಲ್ಲಿ ನಾಲ್ವರು ಪ್ರವಾಸಿಗಳು ಸೇರಿದಂತೆ ಐವರು ಸಿಕ್ಕಿಹಾಕಿಕೊಂಡಿದ್ದ ಘಟನೆ ಶುಕ್ರವಾರ ಸಂಭವಿಸಿದ್ದು, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿಗಳು ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
ವರದಿಗಳ ಪ್ರಕಾರ ಅಪರಾಹ್ನ 1:30ರ ಸುಮಾರಿಗೆ ಈ ಘಟನೆ ಸಂಭವಿಸಿತ್ತು. ಕ್ರೇನ್ ನಲ್ಲಿ ತಾಂತ್ರಿಕ ದೋಷವುಂಟಾದ ಬಳಿಕ ಕಣ್ಣೂರಿನ ನಾಲ್ವರು ಸದಸ್ಯರ ಕುಟುಂಬ ಮತ್ತು ರೆಸ್ಟೋರಂಟ್ ನ ಮಹಿಳಾ ಸಿಬ್ಬಂದಿ ಆಗಸದಲ್ಲಿ ಅತಂತ್ರರಾಗಿದ್ದರು.
ಗಿರಿಧಾಮದಲ್ಲಿಯ ಅನಚ್ಚಾಲ್ ಗ್ರಾಮದ ವಿಹಂಗಮ ನೋಟವನ್ನು ಆಸ್ವಾದಿಸಲು ಅತಿಥಿಗಳನ್ನು ಕ್ರೇನ್ ಮೂಲಕ ನೆಲದಿಂದ 120 ಅಡಿ ಎತ್ತರಕ್ಕೆ ಏರಿಸಲಾಗಿದ್ದು,ಅಲ್ಲಿ ಅವರಿಗೆ ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಆದರೆ ಕ್ರೇನ್ ನ ಹೈಡ್ರಾಲಿಕ್ ವ್ಯವಸ್ಥೆ ಕೆಲಸ ಮಾಡುವುದನ್ನು ನಿಲ್ಲಿಸಿದ್ದರಿಂದ ಅವರನ್ನು ಕೆಳಕ್ಕೆ ಇಳಿಸಲು ಸಾಧ್ಯವಾಗಿರಲಿಲ್ಲ.
ಮುನ್ನಾರ್ ನಿಂದ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿಗಳು ಹಗ್ಗಗಳ ಮೂಲಕ ಮೊದಲು ಇಬ್ಬರು ಮಕ್ಕಳು ಮತ್ತು ತಾಯಿಯನ್ನು,ನಂತರ ತಂದೆಯನ್ನು ಮತ್ತು ಕೊನೆಯದಾಗಿ ಮಹಿಳಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಕ್ಕಿಳಿಸಿದರು.
ಅನಚ್ಚಾಲ್ ನಲ್ಲಿ ಇತ್ತೀಚಿಗೆ ಸ್ಥಾಪನೆಯಾಗಿರುವ ಸದರ್ನ್ ಸ್ಕೈಸ್ ಎರೋಡೈನಾಮಿಕ್ಸ್ ಗಿರಿಧಾಮದ ಎತ್ತರದ ಸಾಹಸ ಪ್ರವಾಸೋದ್ಯಮವನ್ನು ಅನುಭವಿಸಲು ಪ್ರವಾಸಿಗಳಿಗೆ ಹೊಸ ಅವಕಾಶಗಳನ್ನು ಒದಗಿಸಿದೆ.