ಆರೆಸ್ಸೆಸ್ ಸಭೆಯಲ್ಲಿ ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಮುರಳಿ ಮನೋಹರ್ ಜೋಷಿ!
ಮುರಳಿ ಮನೋಹರ್ ಜೋಷಿ (Photo: PTI)
ಹೊಸದಿಲ್ಲಿ : ಆಗಸ್ಟ್ ನಲ್ಲಿ ದಿಲ್ಲಿಯಲ್ಲಿ ನಡೆದ ಆರೆಸ್ಸೆಸ್ ಸಭೆಯಲ್ಲಿ ಬಿಜೆಪಿಯ ಮಾರ್ಗದರ್ಶಕ ಮಂಡಳಿ ಸದಸ್ಯ ಮುರಳಿ ಮನೋಹರ್ ಜೋಷಿ ಅವರು ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವುದಾಗಿ indianexpress.com ವರದಿ ಮಾಡಿದೆ.
ಆರೆಸ್ಸೆಸ್ ಗೆ ನೂರು ವರ್ಷವಾದ ಹಿನ್ನೆಲೆಯಲ್ಲಿ ಮೂರು ದಿನಗಳ ಉಪನ್ಯಾಸ ಕಾರ್ಯಕ್ರಮ, ಆರ್ಥಿಕ ರಂಗಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 80 ವಿಶೇಷ ಪ್ರತಿನಿಧಿಗಳ ಅರ್ಥ ಸಮೂಹ ಸಭೆಯೂ ನಡೆದಿದೆ. ಅಲ್ಲಿಗೆ ಮುರಳಿ ಮನೋಹರ್ ಜೋಷಿ ಅವರನ್ನು ಆಹ್ವಾನಿಸಲಾಗಿತ್ತು.
ಬಿಜೆಪಿ ಮೋದಿ ಮತ್ತು ಅಮಿತ್ ಶಾ ಅವರ ಕೈವಶವಾದಾಗ ಮುರಳಿ ಮನೋಹರ್ ಜೋಷಿ ಅವರನ್ನು ʼಮಾರ್ಗದರ್ಶಕ ಮಂಡಳಿʼಗೆ ಕಳುಹಿಸಲಾಯಿತು.
ಮುರಳಿ ಮನೋಹರ್ ಜೋಷಿ ಅವರನ್ನು ಈಗ ಆರೆಸ್ಸೆಸ್ ಕರೆಸಿಕೊಂಡಿದೆ. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಜೊತೆ ದತ್ತಾತ್ರೇಯ ಹೊಸಬಾಳೆ ಕೂಡ ಹಾಜರಿದ್ದರು. ಆರೆಸ್ಸೆಸ್ ನ ಎಲ್ಲಾ ವಿಭಾಗಗಳ ಜನರನ್ನು ಸಭೆಗೆ ಆಹ್ವಾನಿಸಲಾಗಿತ್ತು.
ವರದಿ ಪ್ರಕಾರ, ಸಭೆಯಲ್ಲಿ ಭಾರತದ ಆರ್ಥಿಕ ಅಸಮಾನತೆ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಚರ್ಚಿಸಲಾಯಿತು. ಮುರಳಿ ಮನೋಹರ್ ಜೋಷಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.
ದೇಶದಲ್ಲಿನ ಆದಾಯ ಅಸಮಾನತೆ ಮತ್ತು ಭಾರತದ ಬಡವರ ತಲಾ ಜಿಡಿಪಿ, ಶ್ರೀಮಂತರು ಮತ್ತು ಬಡವರ ನಡುವಿನ ವ್ಯತ್ಯಾಸದ ಬಗ್ಗೆಯೂ ಜೋಷಿ ಮಾತಾಡಿರುವುದಾಗಿ ವರದಿಯಾಗಿದೆ.
ಮುರಳಿ ಮನೋಹರ್ ಜೋಷಿಯವರ ಮಾತುಗಳನ್ನು ಮೋಹನ್ ಭಾಗವತ್ ತುಂಬಾ ಇಷ್ಟಪಟ್ಟರು ಎನ್ನಲಾಗಿದೆ. ನಾನು ಹೇಳಬೇಕೆಂದಿದ್ದುದನ್ನೇ ಜೋಷಿಯವರು ಹೇಳಿದ್ದಾರೆ ಎಂದು ಭಾಗವತ್ ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.
ಅಮರ್ತ್ಯ ಸೇನ್ ಅವರನ್ನು ಉಲ್ಲೇಖಿಸಿದ ಮುರಳಿ ಮನೋಹರ್ ಜೋಷಿ, ಆರ್ಥಿಕ ಯಶಸ್ಸನ್ನು ಕೇವಲ ಆದಾಯದಿಂದ ನಿರ್ಣಯಿಸಿದರೆ, ಯೋಗಕ್ಷೇಮದ ಗುರಿ ತಪ್ಪುತ್ತದೆ ಎಂದು ಹೇಳಿದ್ದಾರೆ. ದೇಶದ 10% ಶ್ರೀಮಂತರು ಒಟ್ಟು ಸಂಪತ್ತಿನ 65% ರಷ್ಟನ್ನು ಹೊಂದಿರುವ ಬಗ್ಗೆಯೂ ಹೇಳಿರುವ ಅವರು, ದೇಶದ ತಲಾ ಜಿಡಿಪಿ ಕುಸಿಯುತ್ತಿರುವ ಬಗ್ಗೆಯೂ ಜೋಶಿ ಕಳವಳ ವ್ಯಕ್ತಪಡಿಸಿದ್ದಾರೆ.
ಜಪಾನ್ ಅನ್ನು ಹಿಂದಿಕ್ಕಿದ್ದೇವೆ ಎಂದು ಹೇಳಲಾಗುತ್ತಿರುವುದರ ಹಿಂದಿನ ಸತ್ಯವನ್ನೆಲ್ಲ ಮುರಳಿ ಮನೋಹರ್ ಜೋಷಿ ಈ ಸಭೆಯಲ್ಲಿ ಹೇಳಿದ್ದಾರೆ. ಸಂಪತ್ತಿನ ಅಸಮಾನತೆಯ ಕುರಿತು ಮಾತನಾಡಿದ ಮುರಳಿ ಮನೋಹರ್ ಜೋಷಿ, 2021ರಲ್ಲಿ ಭಾರತದ ಜನಸಂಖ್ಯೆಯ ಅತ್ಯಂತ ಶ್ರೀಮಂತ 10% ಜನರು ಒಟ್ಟು ಸಂಪತ್ತಿನ 65% ಅನ್ನು ಹೊಂದಿದ್ದರು ಎಂದು ಹೇಳಿದರು. ಭಾರತದ ತಲಾವಾರು GDP ಕೇವಲ 2,878.5 ಡಾಲರ್ ರಷ್ಟಿದ್ದು, ಜಪಾನ್ ತ ($33,955.7) ಕೆಳಗಿದೆ ಎಂದು ಹೇಳಿದ್ದಾರೆ.
ಅಮರ್ತ್ಯ ಸೇನ್ ಅವರನ್ನು ಉಲ್ಲೇಖಿಸುವ ಮೂಲಕ, ಅವರು ಕೃಷಿಯ ಮೇಲೆ ಎಷ್ಟು ಹೊರೆ ಇದೆ ಎಂದು ಹೇಳಿದ್ದಾರೆ. ದೇಶದ ತಲಾ ಆದಾಯ ದುರ್ಬಲವಾಗಿರುವುದರ ಬಗ್ಗೆ, ಕೈಗಾರಿಕಾ ಉತ್ಪಾದನೆ ಕುಸಿತದ ಬಗ್ಗೆಯೂ ಮಾತನಾಡಿದ್ದಾರೆ.
ಚೀನಾದ ಸಂಪೂರ್ಣ ಬೆಳವಣಿಗೆ ಉತ್ಪಾದನಾ ವಲಯವನ್ನು ಆಧರಿಸಿದೆ. ಆದರೆ ನಮ್ಮ ದೇಶದ ಸಮಸ್ಯೆಯೆಂದರೆ ಉತ್ಪಾದನಾ ವಲಯ ಎಂದಿಗೂ ಬೆಳೆಯುವುದು ಸಾಧ್ಯವಾಗಲಿಲ್ಲ. ಭಾರತದ ಕೈಗಾರಿಕಾ ವಲಯ 25% ಜನರಿಗೆ ಮಾತ್ರ ಉದ್ಯೋಗ ಒದಗಿಸುತ್ತದೆ ಎಂದು ಹೇಳಲಾಗಿದೆ. ಅನೌಪಚಾರಿಕ ವಲಯದಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಹೆಚ್ಚಾಗಿ ಉದ್ಯೋಗಗಳಿರುವುದು ಅನೌಪಚಾರಿಕ ವಲಯದಲ್ಲಿ. ವಿದೇಶಗಳ ಮೇಲೆ ಅತಿ ಅವಲಂಬನೆ ದೇಶಕ್ಕೆ ಸಮಸ್ಯೆ ತರಲಿದೆ, ಅದರಿಂದ ನಮ್ಮ ಹಿತಾಸಕ್ತಿ ಹಾಗು ಗೌರವಕ್ಕೆ ಧಕ್ಕೆ ಬರಲಿದೆ ಎಂದು ಎಚ್ಚರಿಸಿರುವ ಜೋಷಿ ನಾವು ಇಲ್ಲದನ್ನು ಗಳಿಸಲು ಯೋಜನೆ ಹಾಕುತ್ತೇವೆ, ಆದರೆ ಇರುವುದನ್ನು ಉಳಿಸಿಕೊಳ್ಳಲು ಮುಂದಾಗುತ್ತಿಲ್ಲ. ಕೃಷಿ ಹಾಗೂ ದೇಶಿಯ ಕೈಗಾರಿಕೆಗಳ ಮೇಲೆ ಗಮನ ಹರಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ಜೋಷಿ ಹೇಳಿದ್ದಾರೆ.
ತಾಪಮಾನ ಹೆಚ್ಚಳ ಹಾಗೂ ಹವಾಮಾನ ಬದಲಾವಣೆಯ ಗಂಭೀರ ಅಪಾಯಗಳ ಬಗ್ಗೆಯೂ ಜೋಷಿ ಎಚ್ಚರಿಸಿದ್ದಾರೆ. ಅವುಗಳು ದೇಶದ ಕೆಲವು ರಾಜ್ಯಗಳಲ್ಲಿ ತೀವ್ರ ಅಪಾಯ ತಂದೊಡ್ಡುವ ಸಾಧ್ಯತೆಗಳ ಬಗ್ಗೆಯೂ ಅವತು ಮಾತಾಡಿದ್ದಾರೆ.
ದೇಶದಲ್ಲಿ ಡ್ರಗ್ಸ್ ಪಿಡುಗು ತೀವ್ರವಾಗಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಜೋಷಿ, ಆತ್ಮಹತ್ಯೆಗಳು, ನೈಸರ್ಗಿಕ ವಿಕೋಪಗಳೂ ಹೆಚ್ಚುತ್ತಿವೆ ಎಂದು ನೆನಪಿಸಿದ್ದಾರೆ. ಹಿಮಾಲಯ ಪ್ರದೇಶದ ರಸ್ತೆಗಳನ್ನು ಅಗಲ ಮಾಡುವುದಕ್ಕಿಂತ ಅವುಗಳ ಸ್ಥಿರತೆಯತ್ತ ಗಮನ ಹರಿಸುವುದು ಒಳಿತು ಎಂದು ಸಲಹೆ ನೀಡಿದ್ದಾರೆ.
ಈ ಎಲ್ಲಾ ವಿಷಯಗಳನ್ನು ವಿರೋಧ ಪಕ್ಷಗಳು ಈಗಾಗಲೇ ಹೇಳುತ್ತಲೇ ಇವೆ. ಈಗ ಮುಖ್ಯ ಪ್ರಶ್ನೆಯೆಂದರೆ, ಆರೆಸ್ಸೆಸ್ ಸಭೆಯಲ್ಲಿ ಈ ಎಲ್ಲಾ ವಿಷಯಗಳನ್ನು ಏಕೆ ಎತ್ತಿಕೊಳ್ಳಲಾಗುತ್ತಿದೆ ಎಂಬುದು. ದತ್ತಾತ್ರೇಯ ಹೊಸಬಾಳೆ ಈ ಸಭೆಯಲ್ಲಿ ಚರ್ಚೆಯಾದ ವಿಷಯವನ್ನು ಮೋದಿ ಸರ್ಕಾರದ ಕುರಿತ ಟೀಕೆಯಾಗಿ ತೆಗೆದುಕೊಳ್ಳಬಾರದು ಎಂದು ಕೂಡ ಹೇಳಿದ್ದಾರೆ.