×
Ad

ಕೇರಳದಲ್ಲಿ ಸರಕಾರಿ ಉದ್ಯೋಗಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯತೆಯ ಕೊರತೆ : ವರದಿ

Update: 2025-07-26 18:14 IST

 ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಕೇರಳದಲ್ಲಿ ಕೇಂದ್ರ ಸರಕಾರಿ ಮತ್ತು ರಾಜ್ಯ ಸರಕಾರಿ ಉದ್ಯೋಗಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯವು ಅವರ ಜನಸಂಖ್ಯೆಗೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದೆ ಎಂದು ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತಿನ ಅಧ್ಯಯನವೊಂದು ತಿಳಿಸಿದೆ.

ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತು 2004 ಮತ್ತು 2019ರ ನಡುವೆ ರಾಜ್ಯದಲ್ಲಿನ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಬದಲಾವಣೆಗಳ ಬಗ್ಗೆ ಸಿದ್ಧಪಡಿಸಿದ 'ಕೇರಳ ಅಧ್ಯಯನ 2.0' ಎಂಬ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ ಎಂದು The Hindu ವರದಿ ಮಾಡಿದೆ.

2019ರಲ್ಲಿ ಮುಸ್ಲಿಮರು ಜನಸಂಖ್ಯೆಯ 27.3% ರಷ್ಟಿದ್ದರೂ, ರಾಜ್ಯ ಸರಕಾರಿ ಉದ್ಯೋಗಗಳಲ್ಲಿ ಅವರ ಪ್ರಾತಿನಿಧ್ಯ ಕೇವಲ 13.8% ರಷ್ಟಿತ್ತು. ಅವರ ಪ್ರಾತಿನಿಧ್ಯತೆಯ ಕೊರತೆಯು 98.2% ದಷ್ಟಿದೆ ಎಂದು ವರದಿಯು ತಿಳಿಸಿದೆ.

2004ರಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ 26.9% ಇತ್ತು. ಆದರೆ ಕೇವಲ 11.4% ಜನರು ಮಾತ್ರ ಸರಕಾರಿ ನೌಕರಿಯಲ್ಲಿದ್ದರು. ಪ್ರಾತಿನಿಧ್ಯತೆಯ ಕೊರತೆಯ ಶೇಕಡಾವಾರು 136 ಆಗಿತ್ತು.

2019ರ ಸಮೀಕ್ಷೆಯಲ್ಲಿ 30.2% ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರೂ, ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ಅವರ ಪ್ರಾತಿನಿಧ್ಯವು ಕೇವಲ 1.8% ಮಾತ್ರವಾಗಿದೆ. ಜನಸಂಖ್ಯೆಗೆ ಹೋಲಿಸಿದರೆ, ಕೇಂದ್ರ ಸರಕಾರಿ ಉದ್ಯೋಗಗಳಲ್ಲಿ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯತೆಯ ಕೊರತೆಯ ಪ್ರಮಾಣ 1,578% ಆಗಿದೆ. ಸಮೀಕ್ಷೆ ಪ್ರಕಾರ, ರಾಜ್ಯ ಸರಕಾರಿ ಉದ್ಯೋಗಗಳಲ್ಲಿ ಮುಸ್ಲಿಮರ ಪ್ರತಿನಿಧ್ಯತೆಯ ಕೊರತೆ 91% ಆಗಿದೆ. ಅಂದರೆ, ಮುಸ್ಲಿಂ ಸಮುದಾಯದವರು ಸರಕಾರಿ ಉದ್ಯೋಗಗಳಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿದ್ದಾರೆ ಎಂಬುದನ್ನು ಈ ಸಮೀಕ್ಷೆ ತಿಳಿಸಿದೆ.

ಪರಿಶಿಷ್ಟ ಜಾತಿ ಸಮುದಾಯಗಳ ಅಂಕಿ- ಅಂಶಗಳನ್ನು ನೋಡಿದಾಗ ಜನಸಂಖ್ಯೆಯಲ್ಲಿ ಅವರ ಪ್ರಾತಿನಿಧ್ಯವು 2004 ಮತ್ತು 2019ರಲ್ಲಿ ಕ್ರಮವಾಗಿ 9% ಮತ್ತು 9.1% ರಷ್ಟಿತ್ತು. ಆದರೆ, ಇದೇ ವರ್ಷಗಳಲ್ಲಿ ಸರಕಾರಿ ಉದ್ಯೋಗಗಳಲ್ಲಿ ಅವರ ಪ್ರಾತಿನಿಧ್ಯ ಕ್ರಮವಾಗಿ 7.6% ಮತ್ತು 8.5% ರಷ್ಟಿತ್ತು.

ಪರಿಶಿಷ್ಟ ಪಂಗಡಗಳು 2004ರಲ್ಲಿ ಜನಸಂಖ್ಯೆಯ 1.2% ಮತ್ತು 2019ರಲ್ಲಿ 1% ರಷ್ಟಿದ್ದವು, ಆದರೆ ಸರಕಾರಿ ಉದ್ಯೋಗಗಳಲ್ಲಿ ಅವರ ಪ್ರಾತಿನಿಧ್ಯವು 0.8% ರಷ್ಟಿದೆ ಎಂದು ಸಮೀಕ್ಷೆಯು ತಿಳಿಸಿದೆ.

ರಾಜ್ಯ ಸರಕಾರಿ ಉದ್ಯೋಗಗಳಲ್ಲಿ ಹಿಂದೂ ಮೇಲ್ಜಾತಿ ಸಮುದಾಯಗಳು 83% ಮತ್ತು ಕೇಂದ್ರ ಸರಕಾರಿ ಉದ್ಯೋಗಗಳಲ್ಲಿ 128% ಪ್ರಾತಿನಿಧ್ಯವನ್ನು ಹೊಂದಿವೆ ಎಂದು ಸಮೀಕ್ಷೆಯು ತಿಳಿಸಿದೆ.

26% ಜನಸಂಖ್ಯೆಯಲ್ಲಿ ಸರಕಾರಿ ಉದ್ಯೋಗಗಳಲ್ಲಿ 39.9% ಪ್ರಾತಿನಿಧ್ಯತೆ ಇದೆ. ಕೇಂದ್ರ ಸರಕಾರಿ ಉದ್ಯೋಗಗಳಲ್ಲಿ 45.5% ಮತ್ತು ರಾಜ್ಯ ಸರಕಾರಿ ಉದ್ಯೋಗಗಳಲ್ಲಿ 38.2% ಪ್ರಾತಿನಿಧ್ಯತೆ ಇದೆ ಎಂದು ವರದಿಯು ತಿಳಿಸಿದೆ. ಇದರೊಂದಿಗೆ, ಅವರು ಆರ್ಥಿಕವಾಗಿ ದುರ್ಬಲ ವರ್ಗಗಳ ವಿಭಾಗದಲ್ಲಿ 10% ಮೀಸಲಾತಿ ಪಡೆಯುತ್ತಾರೆ. ಇದು ಹೆಚ್ಚಿನ ಅಸಮತೋಲನಕ್ಕೆ ಕಾರಣವಾಗಿದೆ ಎಂದು ಸಮೀಕ್ಷೆಯು ತಿಳಿಸಿದೆ.

ಸಮೀಕ್ಷೆಯ ಪ್ರಕಾರ, 2004ರಲ್ಲಿ ಮೇಲ್ಜಾತಿಯ ಹಿಂದೂಗಳು ಜನಸಂಖ್ಯೆಯ 24.1% ರಷ್ಟಿದ್ದು, ರಾಜ್ಯ ಸರಕಾರಿ ಉದ್ಯೋಗಗಳಲ್ಲಿ ಅವರ ಪ್ರಾತಿನಿಧ್ಯ 13.8% ರಷ್ಟಿತ್ತು. 2019ರಲ್ಲಿ ಅವರ ಜನಸಂಖ್ಯೆಯು 15.2% ಕ್ಕೆ ಇಳಿದಿದೆ ಮತ್ತು ಸರಕಾರಿ ಉದ್ಯೋಗಗಳಲ್ಲಿ ಪ್ರಾತಿನಿಧ್ಯ 26.7% ರಷ್ಟಿದೆ.

2004 ಮತ್ತು 2019ರಲ್ಲಿ ಹಿಂದೂ ಹಿಂದುಳಿದ ವರ್ಗಗಳು ಕ್ರಮವಾಗಿ 28.5% ಮತ್ತು 31.2% ರಷ್ಟಿದ್ದವು. ಈ ಅವಧಿಯಲ್ಲಿ ಸರಕಾರಿ ಉದ್ಯೋಗಗಳಲ್ಲಿ ಅವರ ಪ್ರಾತಿನಿಧ್ಯವು 30.4% ಮತ್ತು 33.6% ರಷ್ಟಿತ್ತು.

2004ರಲ್ಲಿ ಕ್ರಿಶ್ಚಿಯನ್ನರು ಜನಸಂಖ್ಯೆಯ 18.3% ರಷ್ಟಿದ್ದರು ಮತ್ತು ಸರಕಾರಿ ಉದ್ಯೋಗಗಳಲ್ಲಿ ಅವರ ಪ್ರಾತಿನಿಧ್ಯ 20.6% ರಷ್ಟಿತ್ತು. 2019ರಲ್ಲಿ, ಮೇಲ್ವರ್ಗದ ಕ್ರಿಶ್ಚಿಯನ್ನರು 12.2% ರಷ್ಟಿದ್ದರು ಮತ್ತು ಕೆಳವರ್ಗದ ಕ್ರಿಶ್ಚಿಯನ್ನರು 4% ರಷ್ಟಿದ್ದರು. ಸರಕಾರಿ ಉದ್ಯೋಗಗಳಲ್ಲಿ ಅವರ ಪ್ರಾತಿನಿಧ್ಯ ಕ್ರಮವಾಗಿ 12.4% ಮತ್ತು 4.2% ರಷ್ಟಿತ್ತು ಎಂದು ಸಮೀಕ್ಷೆಯು ಬಹಿರಂಗ ಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News