×
Ad

ವೈಷ್ಣೋದೇವಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದವರಲ್ಲಿ ಶೇ. 90 ಮುಸ್ಲಿಂ ವಿದ್ಯಾರ್ಥಿಗಳು: ಸಂಘ ಪರಿವಾರದ ಸಂಘಟನೆಗಳಿಂದ ಪ್ರತಿಭಟನೆ

Update: 2025-11-21 17:23 IST

Photo credit: news18.com

ಕತ್ರಾ: ಶ್ರೀ ಮಾತಾ ವೈಷ್ಣೋದೇವಿ ವೈದ್ಯಕೀಯ ಶ್ರೇಷ್ಠತಾ ಸಂಸ್ಥೆಯ ಮೊದಲ ಬ್ಯಾಚ್ ಪ್ರವೇಶ ಪಟ್ಟಿಯಲ್ಲಿ ಕಾಶ್ಮೀರ ಮೂಲದ ಮುಸ್ಲಿಂ ವಿದ್ಯಾರ್ಥಿಗಳ ಪ್ರಮಾಣ 90% ಕ್ಕೆ ಏರಿರುವ ಹಿನ್ನೆಲೆಯಲ್ಲಿ ಜಮ್ಮು ಪ್ರದೇಶದಲ್ಲಿ ಸಂಘ ಪರಿವಾರಕ್ಕೆ ಸೇರಿದ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿವೆ. ಪ್ರವೇಶ ಪಟ್ಟಿಯನ್ನು ರದ್ದುಗೊಳಿಸುವಂತೆ ಅವರು ಆಗ್ರಹಿಸಿವೆ ಎಂದು indianexpress.com ವರದಿ ಮಾಡಿದೆ.

ಜಮ್ಮು ಮತ್ತು ಕಾಶ್ಮೀರದ ವೃತ್ತಿಪರ ಪ್ರವೇಶ ಪರೀಕ್ಷಾ ಮಂಡಳಿ (JKBOPEE) ಪ್ರಕಟಿಸಿದ 50 ಅಭ್ಯರ್ಥಿಗಳ ಪಟ್ಟಿಯಲ್ಲಿ 42 ಮಂದಿ ಕಾಶ್ಮೀರ ಮೂಲದವರು ಹಾಗೂ ಉಳಿದ ಎಂಟು ಮಂದಿ ಜಮ್ಮುವಿನವರು. ಇವರಲ್ಲಿ ಕಾಶ್ಮೀರದ 36 ಮಂದಿ ಮತ್ತು ಜಮ್ಮುವಿನ ಮೂವರು ಈಗಾಗಲೇ ಪ್ರವೇಶ ಪಡೆದಿದ್ದಾರೆ.

ವಿಎಚ್‌ಪಿ ಮತ್ತು ಬಜರಂಗ ದಳ ಸಂಘಟನೆಗಳು ಕತ್ರಾದಲ್ಲಿರುವ ಶ್ರೀ ಮಾತಾ ವೈಷ್ಣೋದೇವಿ ವೈದ್ಯಕೀಯ ಶ್ರೇಷ್ಠತಾ ಸಂಸ್ಥೆಯ ಮುಂಭಾಗ ಪ್ರತಿಭಟನೆ ನಡೆಸಿ ದೇವಾಲಯ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತಿಕೃತಿಯನ್ನು ಸುಟ್ಟು ಹಾಕಿದ್ದಾರೆ.

ವಿಎಚ್‌ಪಿ ಜಮ್ಮು ಮತ್ತು ಕಾಶ್ಮೀರ ಘಟಕದ ಅಧ್ಯಕ್ಷ ರಾಜೇಶ್ ಗುಪ್ತಾ, “ಈ ಪ್ರವೇಶ ಪಟ್ಟಿ ವೈದ್ಯಕೀಯ ಕಾಲೇಜನ್ನು ಇಸ್ಲಾಮೀಕರಣಗೊಳಿಸುವ ಪಿತೂರಿ” ಎಂದು ಆರೋಪಿಸಿ, 2025–26ರ ಪ್ರವೇಶವನ್ನು ತಕ್ಷಣ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಇದು ವೈಷ್ಣೋದೇವಿ ದೇವಾಲಯದ ದೇಣಿಗೆಗಳಿಂದ ಸ್ಥಾಪಿಸಲಾದ ಸಂಸ್ಥೆಯಾಗಿದೆ. ಇಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಸೀಟುಗಳ ಮೀಸಲಾತಿ ಇರಬೇಕು. ಜೆಕೆಬಿಒಪಿಇಇ ಪ್ರವೇಶ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ಪಕ್ಷಪಾತ ತೋರಿದೆ ಎಂದು ಬಜರಂಗ ದಳದ ರಾಜ್ಯ ಅಧ್ಯಕ್ಷ ರಾಕೇಶ್ ಬಜರಂಗಿ ಆರೋಪಿಸಿದ್ದಾರೆ.

ಪ್ರತಿಭಟನಾಕಾರರ ಪರವಾಗಿ ಮಾತನಾಡಿದ ಉಧಮ್‌ಪುರ ಬಿಜೆಪಿ ಶಾಸಕ ಆರ್.ಎಸ್. ಪಠಾನಿಯಾ, “ಅಲ್ಪಸಂಖ್ಯಾತ ಸಂಸ್ಥೆಗಳಿಗೂ ತಮ್ಮ ಸಮುದಾಯಕ್ಕೆ ಸೀಟುಗಳ ಮೀಸಲಾತಿ ಇದೆ. ವೈಷ್ಣೋದೇವಿ ಸಂಸ್ಥೆಯು ಸರ್ಕಾರದ ನಿಧಿ ಪಡೆಯದೆ, ಯಾತ್ರಿಕರ ದೇಣಿಗೆಗಳ ಮೇಲೆ ನಡೆಯುತ್ತದೆ. ಆದ್ದರಿಂದ ಹಿಂದೂ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಬೇಕು” ಎಂದು ಆಗ್ರಹಿಸಿದರು.

ಆದರೆ ಅಧಾಕಾರಿಗಳು ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಮಾರ್ಗಸೂಚಿಯ ಪ್ರಕಾರ, ಜೆ & ಕೆ ಯ 13 ವೈದ್ಯಕೀಯ ಕಾಲೇಜುಗಳ 1,685 ಸೀಟುಗಳಿಗೆ ಎಲ್ಲ ಪ್ರವೇಶಗಳು NEET ರ‍್ಯಾಂಕ್ ಆಧಾರಿತವಾಗಿರಬೇಕು ಮತ್ತು 85% ಸೀಟುಗಳು ಕೇಂದ್ರಾಡಳಿತ ಪ್ರದೇಶದ ನಿವಾಸಿಗಳಿಗೆ ಮೀಸಲಾಗಿರಬೇಕು.15% ಸೀಟುಗಳು ಆಲ್–ಇಂಡಿಯಾ ಅಭ್ಯರ್ಥಿಗಳಿಗೆ ಮುಕ್ತ ಎಂದು ಅವರು ತಿಳಿಸಿದ್ದಾರೆ.

ವೈಷ್ಣೋದೇವಿ ಸಂಸ್ಥೆಗೆ NMC ಅನುಮೋದನೆ ತಡವಾಗಿ ಸಿಕ್ಕ ಕಾರಣ ಪ್ರವೇಶಗಳು ಮೂರನೇ ಸುತ್ತಿನ ಕೌನ್ಸೆಲಿಂಗ್ ನಂತರ ನಡೆದವು. ಜೆಕೆಬಿಒಪಿಇಇ ಒಟ್ಟು 5,865 ಕೇಂದ್ರಾಡಳಿತ ಪ್ರದೇಶಗಳ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, ಇವರಲ್ಲಿ 70% ಕ್ಕೂ ಹೆಚ್ಚು ಅಭ್ಯರ್ಥಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರು.

ಬಹುತೇಕ ವರ್ಷಗಳಿಂದ ಜಮ್ಮುವಿನ ವೈದ್ಯಕೀಯ ಕಾಲೇಜುಗಳಲ್ಲಿಯೂ ಕಾಶ್ಮೀರದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುತ್ತಿರುವುದು ಹೊಸದೇನೂ ಅಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂಜಿನಿಯರಿಂಗ್ ಪ್ರವೇಶಗಳಲ್ಲಿ ಮಾತ್ರ ಜಮ್ಮುವಿನ ವಿದ್ಯಾರ್ಥಿಗಳು ಹೆಚ್ಚಿನ ಸ್ಥಾನಗಳನ್ನು ಪಡೆಯುತ್ತಾರೆ.ಇದು “ಹಳೆಯ ಪ್ರವೃತ್ತಿಯ ಮುಂದುವರಿಕೆ” ಎಂದು ಅವರು ವಿವರಿಸಿದರು.

ಜಮ್ಮು ಪ್ರದೇಶದಲ್ಲಿ 900 ಮತ್ತು ಕಾಶ್ಮೀರದಲ್ಲಿ 675 ಮೆಡಿಕಲ್ ಸೀಟುಗಳಿದ್ದರೂ, ಕಳೆದ ಕೆಲವು ವರ್ಷಗಳಿಂದ ಇವುಗಳಲ್ಲಿ ಹೆಚ್ಚಿನ ಸೀಟುಗಳನ್ನು ಕಾಶ್ಮೀರ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಶ್ರೀ ಮಾತಾ ವೈಷ್ಣೋದೇವಿ ದೇವಾಲಯ ಮಂಡಳಿಯು ಸಂಸ್ಥೆಗೆ ಅಲ್ಪಸಂಖ್ಯಾತ ಸ್ಥಾನಮಾನ ಕೋರಿ ಅರ್ಜಿ ಸಲ್ಲಿಸದಿರುವುದೇ ಈಗಿನ ಪರಿಸ್ಥಿತಿಗೆ ಕಾರಣ ಎಂದು ನ್ಯಾಷನಲ್ ಕಾನ್ಫರೆನ್ಸ್ ನ ಜಮ್ಮು ಪ್ರಾಂತದ ಅಧ್ಯಕ್ಷ ರತ್ತನ್ ಲಾಲ್ ಗುಪ್ತಾ ಆರೋಪಿಸಿದ್ದಾರೆ.

ವೈಷ್ಣೋದೇವಿ ಸಂಸ್ಥೆ ಕೇಂದ್ರ ನೀಟ್ ಪೂಲ್‌ನಿಂದ ಪ್ರವೇಶಕ್ಕೆ ಅವಕಾಶ ನೀಡಲು NMC ಯಲ್ಲಿ ಮನವಿ ಮಾಡಿದ್ದರೂ, ಸರ್ಕಾರದ ಅಥವಾ ಪ್ರಮುಖ ಸ್ವಾಯತ್ತ ಸಂಸ್ಥೆಗಳಿಗಷ್ಟೇ ಅಂತಹ ಅವಕಾಶ ಇರುವುದರಿಂದ ವಿನಂತಿಯನ್ನು ತಿರಸ್ಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News