×
Ad

Odisha| ಸ್ವಘೋಷಿತ ಗೋರಕ್ಷಕರಿಂದ ಹಲ್ಲೆಗೊಳಗಾಗಿದ್ದ ಯುವಕ ಮೃತ್ಯು: ಮೂವರು ಆರೋಪಿಗಳ ಬಂಧನ

ʼಜೈ ಶ್ರೀರಾಮ್ʼ, ʼಗೋ ಮಾತಾ ಕಿ ಜೈʼ ಘೋಷಣೆ ಕೂಗುವಂತೆ ಬಲವಂತಪಡಿಸಿದ್ದ ದುಷ್ಕರ್ಮಿಗಳು

Update: 2026-01-16 12:48 IST

Screengrab:X/@zoo_bear

ಭುವನೇಶ್ವರ: ಒಡಿಶಾದ ಬಾಲಸೋರ್‌ನಲ್ಲಿ ಗೋರಕ್ಷಕರ ಗುಂಪು ಯುವಕನೋರ್ವನನ್ನು ಥಳಿಸಿ ಹತ್ಯೆಗೈದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರು ಶಂಕಿತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಶೇಖ್ ಮಕಂದರ್ ಮುಹಮ್ಮದ್(28) ಹತ್ಯೆಯಾದ ಯುವಕ. ಬಾಲಸೋರ್ ಜಿಲ್ಲೆಯ ಆಸ್ಟಿಯಾ ಗ್ರಾಮದ ನಿವಾಸಿಯಾಗಿರುವ ಶೇಖ್ ಮಕಂದರ್ ಮುಹಮ್ಮದ್, ಗೋವುಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನದಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಬುಧವಾರ ಮುಂಜಾನೆ ಪಿಕಪ್ ವ್ಯಾನ್ ಬಾಲಸೋರ್ ಪಟ್ಟಣವನ್ನು ಸಮೀಪಿಸಿದಾಗ, ಗೋರಕ್ಷಕರ ಗುಂಪು ಪಿಕಪ್ ಅನ್ನು ತಡೆಯಲು ಪ್ರಯತ್ನಿಸಿದೆ. ಪಟ್ಟಣದ ಹೊರವಲಯದಲ್ಲಿರುವ ಜಿಮ್ ಸೆಂಟರ್ ಬಳಿ ವ್ಯಾನ್ ಪಲ್ಟಿಯಾಗಿದೆ. ಈ ವೇಳೆ ಚಾಲಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮಕಂದರ್ ಮುಹಮ್ಮದ್ ಅವರನ್ನು ಹಿಡಿದು ಗುಂಪು ಥಳಿಸಿದೆ.

ವೈರಲ್ ವೀಡಿಯೊದಲ್ಲಿ ಮಕಂದರ್ ಮುಹಮ್ಮದ್ ಮೇಲೆ ಪ್ಲಾಸ್ಟಿಕ್ ಪೈಪ್‌ಗಳಿಂದ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸುತ್ತಿರುವುದು, ʼಜೈ ಶ್ರೀರಾಮ್ʼ ಮತ್ತು ʼಗೋ ಮಾತಾ ಕಿ ಜೈʼ ಎಂದು ಘೋಷಣೆ ಕೂಗುವಂತೆ ಬಲವಂತ ಮಾಡುವುದು ಕಂಡು ಬಂದಿದೆ.

ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಬಾಲಸೋರ್ ಸದರ್ ಪೊಲೀಸರು ಈ ಬಗ್ಗೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಂಕಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News