ಭಾರತ–ಪಾಕಿಸ್ತಾನ ಕ್ರಿಕೆಟ್ ಪಂದ್ಯ ವೀಕ್ಷಿಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ: ಸಂಸದ ಉವೈಸಿ
ಅಸದುದ್ದೀನ್ ಉವೈಸಿ (Photo: PTI)
ಹೊಸದಿಲ್ಲಿ: ಭಾರತ–ಪಾಕಿಸ್ತಾನ ನಡುವಿನ ಮುಂಬರುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ವಿರೋಧದ ಸ್ವರ ಮತ್ತಷ್ಟು ಗಂಭೀರಗೊಂಡಿದ್ದು, AIMIM ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಅವರೂ ವಿರೋಧ ವ್ಯಕ್ತಪಡಿಸಿದ್ದಾರೆ.
“ಪಹಲ್ಗಾಮ್ ದಾಳಿಯಲ್ಲಿ ಹಲವು ಕುಟುಂಬಗಳು ಪ್ರಾಣ ಕಳೆದುಕೊಂಡು ಐದು ತಿಂಗಳೂ ಕಳೆದಿಲ್ಲ. ಈ ಮಧ್ಯೆ ಪಾಕಿಸ್ತಾನದೊಂದಿಗಿನ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ” ಎಂದು ಅವರು ಲೋಕಸಭೆಯಲ್ಲಿ ಘೋಷಿಸಿದರು.
ಸಂಸತ್ ನಲ್ಲಿ ಸೋಮವಾರ ನಡೆದ ‘ಆಪರೇಷನ್ ಸಿಂಧೂರ್’ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಉವೈಸಿ, “ಪಾಕಿಸ್ತಾನದ ವಿಮಾನಗಳು ನಮ್ಮ ವಾಯು ಪ್ರದೇಶ ಪ್ರವೇಶಿಸಲು ಸಾಧ್ಯವಿಲ್ಲ. ಅವರ ದೋಣಿಗಳು ನಮ್ಮ ಸಮುದ್ರಗಳತ್ತ ಬರುವಂತಿಲ್ಲ. ನಾವು ಈಗಾಗಲೇ ವ್ಯಾಪಾರವನ್ನು ಸ್ಥಗಿತಗೊಳಿಸಿದ್ದೇವೆ. ಪಾಕಿಸ್ತಾನಕ್ಕೆ ನೀರನ್ನೂ ನಿಲ್ಲಿಸಿದ್ದೇವೆ ಎಂದು ಸರ್ಕಾರವೇ ಹೇಳುತ್ತಿದೆ. ಹಾಗಿರುವಾಗ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯ ಹೇಗೆ ನಡೆಯಬಹುದು?” ಎಂದು ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಪ್ರಶ್ನಿಸಿದ್ದಾರೆ.
ಶಿವಸೇನೆ (ಉದ್ಧವ್ ಬಣ) ರಾಜ್ಯಸಭಾ ಸಂದಸ್ಯೆ ಪ್ರಿಯಾಂಕಾ ಚತುರ್ವೇದಿ ಕೂಡಾ ಸರ್ಕಾರದ ನಿಲುವು ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಒಂದು ಕಡೆ ಭಾರತ ಸೇನಾ ಕಾರ್ಯಾಚರಣೆ ನಡೆಸುತ್ತಿದೆ ಎಂದು ಘೋಷಿಸುತ್ತೀರಿ, ಮತ್ತೊಂದೆಡೆ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯ ನಡೆಸಲು ತಯಾರಿ ನಡೆಸುತ್ತೀರಿ. ಭಾರತೀಯರ ಹಾಗೂ ಸಶಸ್ತ್ರ ಪಡೆಗಳ ರಕ್ತದಲ್ಲಿ ಲಾಭದಾಟ ನಡೆಯುತ್ತಿದೆಯೇ?” ಎಂದು ಅವರು ಟೀಕಿಸಿದರು.
ಏಷ್ಯಾ ಕಪ್ 2025ರ ವೇಳಾಪಟ್ಟಿಯ ಪ್ರಕಾರ, ಭಾರತ ಹಾಗೂ ಪಾಕಿಸ್ತಾನ ಸೆಪ್ಟೆಂಬರ್ 14ರಂದು ಗುಂಪು ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಸೂಪರ್ ಫೋರ್ ಹಾಗೂ ಫೈನಲ್ ಹಂತದಲ್ಲಿಯೂ ಮತ್ತೆ ಮುಖಾಮುಖಿಯಾಗುವ ಸಾಧ್ಯತೆಯಿದೆ. ಇತ್ತೀಚೆಗೆ, ಇಂಗ್ಲೆಂಡ್ ನಲ್ಲಿ ನಡೆಯುತ್ತಿದ್ದ "ವಿಶ್ವ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್" ಟೂರ್ನಿಯಿಂದ ಹರ್ಭಜನ್ ಸಿಂಗ್, ಇರ್ಫಾನ್ ಪಠಾನ್ ಮತ್ತು ಶಿಖರ್ ಧವನ್ ಅವರು ಪಹಲ್ಗಾಮ್ ದಾಳಿಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಹಿಂದೆ ಸರಿದಿದ್ದರು. ಅಂತಿಮವಾಗಿ ಪಂದ್ಯ ರದ್ದುಪಡಿಸಲಾಯಿತು.
ಎಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನ ಮೂಲದ ಉಗ್ರರ ದಾಳಿಗೆ 25ಕ್ಕೂ ಹೆಚ್ಚು ನಾಗರಿಕರು ಬಲಿಯಾದರು. ಇದಕ್ಕೆ ಪ್ರತಿಯಾಗಿ ಭಾರತೀಯ ಭದ್ರತಾ ಪಡೆಗಳು ಪಾಕಿಸ್ತಾನದ ಗಡಿಯಾಚೆ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಒಂಭತ್ತು ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿ 100ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿತ್ತು.