ನನ್ನ ಪತಿಗೆ ಸರಕಾರ ಕಿರುಕುಳ ನೀಡುತ್ತಿದೆ : ರಾಷ್ಟ್ರಪತಿ, ಪ್ರಧಾನಿಗೆ ಪತ್ರ ಬರೆದ ಸೋನಂ ವಾಂಗ್ಚುಕ್ ಪತ್ನಿ
Photo | timesofindia
ಹೊಸ ದಿಲ್ಲಿ: ನನ್ನ ಪತಿಗೆ ಸರಕಾರ ಕಿರುಕುಳ ನೀಡುತ್ತಿದೆ. ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತ ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆ್ಯಂಗ್ಮೊ ಆಗ್ರಹಿಸಿದ್ದಾರೆ.
ಈ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಲಡಾಖ್ ಲೆಫ್ಟಿನೆಂಟ್ ಗವರ್ನರ್‌ಗೆ ಪತ್ರ ಬರೆದಿರುವ ಗೀತಾಂಜಲಿ ಆ್ಯಂಗ್ಮೊ, ಕಳೆದ ನಾಲ್ಕು ವರ್ಷಗಳಿಂದ ಜನರ ಪರವಾಗಿ ಮಾತನಾಡಿದ್ದಕ್ಕೆ ರಾಜ್ಯ ಸರಕಾರ ನಮಗೆ ಕಿರುಕುಳ ನೀಡುತ್ತಿದೆ. ನನ್ನ ಪತಿಯ ಸ್ಥಿತಿಯ ಬಗ್ಗೆ ನನಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
“ಸೆಪ್ಟೆಂಬರ್ 26ರಂದು ನನ್ನ ಪತಿ ಸೋನಂ ವಾಂಗ್ಚುಕ್ ರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯ ಸೆಕ್ಷನ್ 3(2)ರ ಅಡಿ ಬಂಧಿಸಲಾಯಿತು. ಅವರನ್ನು ರಾಜಸ್ಥಾನದ ಜೋಧಪುರ್ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ನನಗೆ ತಿಳಿಸಲಾಯಿತು. ಜೋಧಪುರ್ ತಲುಪುತ್ತಿದ್ದಂತೆಯೇ ಪತಿಯೊಂದಿಗೆ ಮಾತನಾಡಲು ಅವಕಾಶ ನೀಡುವ ಭರವಸೆ ನೀಡಿದ್ದರು. ಆದರೂ ಇಂದಿನವರೆಗೆ (ಅಕ್ಟೋಬರ್ 1) ನನಗೆ ಕರೆ ಮಾಡಿಲ್ಲ ಅಥವಾ ನನ್ನ ಪತಿ ನನ್ನೊಂದಿಗೆ ಮಾತನಾಡುವಂತೆ ಮಾಡಿಲ್ಲ. ನನ್ನ ಪತಿಯ ಸ್ಥಿತಿಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ” ಎಂದು ಗೀತಾಂಜಲಿ ಆ್ಯಂಗ್ಮೊ ತಮ್ಮ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಲಡಾಖ್‌ನಂತಹ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಜನರ ಪರವಾಗಿ ನಿಲ್ಲುವುದು, ಅಜಾಗರೂಕ ಮತ್ತು ಅನಿಯಂತ್ರಿತ ಅಭಿವೃದ್ಧಿ ಚಟುವಟಿಕೆಗಳ ವಿರುದ್ಧ ಹೋರಾಡುವುದು ಪಾಪವೆ? ಸೋನಂ ವಾಂಗ್ಚುಕ್ ಬಂಧನದ ವಿಷಯದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ಮಧ್ಯಪ್ರವೇಶಿಸಬೇಕು ಹಾಗೂ ಅವರನ್ನು ಬೇಷರತ್ತಾಗಿ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಸೋನಂ ವಾಂಗ್ಚುಕ್ ತಮ್ಮ ದೇಶಕ್ಕೆ ಬೆದರಿಕೆಯಾಗಲು ಎಂದಿಗೂ ಸಾಧ್ಯವಿಲ್ಲ. ಅವರು ಲಡಾಖ್‌ನ ಕೆಚ್ಚೆದೆಯ ಮಣ್ಣಿನ ಮಕ್ಕಳಿಗೆ ಸೇವೆ ಸಲ್ಲಿಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ದೇಶದ ರಕ್ಷಣೆಯಲ್ಲಿ ಭಾರತೀಯ ಸೇನೆಯೊಂದಿಗೆ ಅಚಲವಾಗಿ ನಿಂತಿದ್ದಾರೆ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.