ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಕಮಲ್ ಹಾಸನ್
ಕಮಲ್ ಹಾಸನ್ | PTI
ಚೆನ್ನೈ : ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂಬ ತನ್ನ ಹೇಳಿಕೆಯನ್ನು ನಿರ್ಲಕ್ಷಿಸುವಂತೆ ಕೋರಿ ಕರ್ನಾಟಕ ಫಿಲ್ಮ್ ಚೇಂಬರ್‌ಗೆ ಮಂಗಳವಾರ ಪತ್ರ ರವಾನಿಸಿರುವ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್, ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.
ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ನರಸಿಂಹುಲು ಅವರ ವಿಳಾಸಕ್ಕೆ ಕಮಲ್ ಹಾಸನ್ ಪತ್ರ ಬರೆದಿದ್ದಾರೆ. ಪತ್ರದಲ್ಲಿ ತನ್ನ ಪ್ರತಿಕ್ರಿಯೆ ಪ್ರಾಮಾಣಿಕವಾಗಿದೆ. ತನಗೆ ಕರ್ನಾಟಕದ ಜನರ ಬಗ್ಗೆ ಅತೀವ ಗೌರವ ಇದೆ ಎಂದು ಹೇಳಿದ್ದಾರೆ.
‘‘ಥಗ್ ಲೈಫ್’’ ಸಿನೆಮಾದ ಆಡಿಯೊ ಬಿಡುಗಡೆ ಸಮಾರಂಭದಲ್ಲಿ ರಾಜ್‌ಕುಮಾರ್ ಅವರ ಕುಟುಂಬದ ಕುರಿತು, ವಿಶೇಷವಾಗಿ ಶಿವರಾಜ್ ಕುಮಾರ್ ಅವರ ಕುರಿತು ತಾನು ನಿಜವಾದ ಪ್ರೀತಿಯಿಂದ ಮಾತನಾಡಿದ್ದೇನೆ. ಆದರೆ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಸಂದರ್ಭದಿಂದ ಪ್ರತ್ಯೇಕಿಸಿ ಉಲ್ಲೇಖಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ನಾವೆಲ್ಲರೂ ಒಂದೇ ಹಾಗೂ ಒಂದೇ ಕುಟುಂಬದಿಂದ ಬಂದವರು ಎಂದು ತಿಳಿಸುವ ಉದ್ದೇಶ ನನ್ನದಾಗಿತ್ತು. ಕನ್ನಡವನ್ನು ಯಾವುದೇ ರೀತಿಯಲ್ಲಿ ಕುಗ್ಗಿಸುವ ಉದ್ದೇಶ ನನ್ನದಾಗಿರಲಿಲ್ಲ ಎಂದು ಹೇಳಿದ ಅವರು, ಕನ್ನಡ ಭಾಷೆಯ ಶ್ರೀಮಂತ ಪರಂಪರೆಯ ಕುರಿತು ಯಾವುದೇ ವಿವಾದ ಅಥವಾ ಚರ್ಚೆ ಇಲ್ಲ ಎಂದಿದ್ದಾರೆ.
ಕನ್ನಡ ಭಾಷೆಗೆ ಹೆಮ್ಮೆಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆ ಇದೆ. ನಾನು ಕನ್ನಡವನ್ನು ತಮಿಳಿನಂತೆ ಬಹಳ ಹಿಂದಿನಿದಲೇ ಮೆಚ್ಚಿಕೊಂಡಿದ್ದೇನೆ. ತನ್ನ ವೃತ್ತಿ ಜೀವನದುದ್ದಕ್ಕೂ ಕನ್ನಡ ಮಾತನಾಡುವ ಜನರ ಬೆಚ್ಚಗಿನ ಪ್ರೀತಿಯನ್ನು ಪಡೆದಿರುವುದನ್ನು ನೆನಪಿಸಿಕೊಳ್ಳುತ್ತೇನೆ ಎಂದಿದ್ದಾರೆ.
‘‘ನಾನು ಇದನ್ನು ಸ್ಪಷ್ಟ ಆತ್ಮ ಸಾಕ್ಷಿ ಹಾಗೂ ದೃಢ ನಿಶ್ಚಯದಿಂದ ಹೇಳುತ್ತೇನೆ: ಕನ್ನಡ ಭಾಷೆಯ ಕುರಿತ ನನ್ನ ಪ್ರೀತಿ ಪ್ರಾಮಾಣಿಕ. ಕನ್ನಡಿಗರು ತಮ್ಮ ಮಾತೃ ಭಾಷೆಯ ಮೇಲೆ ಹೊಂದಿರುವ ಪ್ರೀತಿಯನ್ನು ನಾನು ಗೌರವಿಸುತ್ತೇನೆ’’ ಎಂದು ಅವರು ಹೇಳಿದ್ದಾರೆ.
ತಮಿಳು, ಕನ್ನಡ, ತೆಲುಗು, ಮಲೆಯಾಳಂ ಹಾಗೂ ಈ ನೆಲದ ಎಲ್ಲಾ ಭಾಷೆಗಳೊಂದಿಗೆ ತನ್ನ ಬಾಂಧವ್ಯ ಶಾಶ್ವತ ಹಾಗೂ ಹೃದಯಸ್ಪರ್ಶಿ ಎಂದು ಅವರು ತಿಳಿಸಿದ್ದಾರೆ. ಎಲ್ಲಾ ಭಾರತೀಯ ಭಾಷೆಗಳ ಸಮಾನ ಘನತೆಯ ಪರವಾಗಿ ತಾನು ಹೇಗೆ ನಿಂತಿದ್ದೆ ಎಂದು ಅವರು ನೆನಪಿಸಿಕೊಂಡಿದ್ದಾರೆ. ಒಂದು ಭಾಷೆಯ ಮೇಲೆ ಇನ್ನೊಂದು ಭಾಷೆಯ ಪ್ರಭುತ್ವವನ್ನು ವಿರೋಧಿಸಿರುವುದನ್ನು ಅವರು ಸ್ಮರಿಸಿಕೊಂಡಿದ್ದಾರೆ.