×
Ad

ಹೈದರಾಬಾದ್‌ ನಿಂದ ಮಧ್ಯಪ್ರದೇಶಕ್ಕೆ ತರಲಾದ 8 ರೇಸ್‌ ಕುದುರೆಗಳ ನಿಗೂಢ ಸಾವು; ತನಿಖೆ ಆರಂಭ

Update: 2025-05-25 22:32 IST

ಸಾಂದರ್ಭಿಕ ಚಿತ್ರ PC: freepic

ಭೋಪಾಲ್: ಪಾರಂಪರಿಕ ತಳಿಗಳು ಸೇರಿದಂತೆ ಭಾರೀ ಮೌಲ್ಯದ ಎಂಟು ರೇಸ್ ಕುದುರೆಗಳ ನಿಗೂಢ ಸಾವಿಗೆ ಸಂಬಂಧಿಸಿ ಮಧ್ಯಪ್ರದೇಶ ಸರಕಾರವು ತನಿಖೆಯನ್ನು ಆರಂಭಿಸಿದೆ.

ಇತ್ತೀಚೆಗೆ ಈ ಕುದುರೆಗಳನ್ನು ತೆಲಂಗಾಣದ ಹೈದರಾಬಾದ್‌ ನಿಂದ ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ರಾಯಪುರ ಗ್ರಾಮದ ಫಾರ್ಮ್‌ ಹೌಸ್‌ ಗೆ ತರಲಾಗಿದ್ದು, ಅಲ್ಲಿ ಅವು ಸಾವನ್ನಪ್ಪಿವೆ. ಕುದರೆಗಳ ಸಾವನ್ನಪ್ಪಿರುವ ಕುರಿತ ವರದಿಗಳ ಬಗ್ಗೆ ಸ್ಥಳೀಯ ಪಶುಸಂಗೋಪನಾ ಇಲಾಖೆಯು ಪ್ರತಿಕ್ರಿಯಿಸಿದ ಬಳಿಕ ಜಬಲ್‌ಪುರ ಜಿಲ್ಲಾಧಿಕಾರಿ ದೀಪಕ್‌ ಸಕ್ಸೇನಾ ಅವರು ತನಿಖೆಗೆ ಆದೇಶಿಸಿದ್ದರು.

ಪಶುಸಂಗೋಪನಾ ಇಲಾಖೆಯ ಅಗತ್ಯ ದಾಖಲೆಪತ್ರಗಳಿಲ್ಲದೆ ಒಟ್ಟು 57 ಕುದುರೆಗಳನ್ನು ಹೈದರಾಬಾದ್‌ ನಿಂದ ಮಧ್ಯಪ್ರದೇಶಕ್ಕೆ ಸಾಗಾಟ ಮಾಡಲಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ಆರೋಪಿಸಿವೆ.

ಎಪ್ರಿಲ್ 29ರಿಂದ ಮೇ 3ರ ನಡುವೆ ಸುಮಾರು 57 ಕುದುರೆಗಳನ್ನು ಸ್ಥಳೀಯ ನಿವಾಸಿ ಸಚಿನ್ ತಿವಾರಿ ಎಂಬವರು ಹೈದರಾಬಾದ್ ಉದ್ಯಮಿಯ ಸಹಕಾರದಿಂದ ರಹಸ್ಯವಾಗಿ ಸಾಗಿಸಿದ್ದರೆನ್ನಲಾಗಿದೆ. ಅಕ್ರಮವಾಗಿ ಸಾಗಿಸಲಾದ ಕುದುರೆಗಳಲ್ಲಿ ಉತ್ಕೃಷ್ಟ ದರ್ಜೆಯ ಮರ್ವಾರಿ ಹಾಗೂ ಥರೋಬ್ರೆಡ್ ತಳಿಯ ಕುದುರೆಗಳು ಕೂಡಾ ಇದ್ದುದಾಗಿ ತಿಳಿದುಬಂದಿದೆ.

ಅಕ್ರಮವಾಗಿ ಸಾಗಿಸಲಾದ ಕುದುರೆಗಳನ್ನು ಪತ್ತೆಹಚ್ಚಲು ನಾಲ್ಕು ತಂಡಗಳನ್ನು ನಿಯೋಜಿಸಲಾಗಿದೆ ಎಂದು ರಾಜ್ಯ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕಿ ಪ್ರಫುಲ್ಲಾ ಮೂನ್ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News