ನಾಗ್ಪುರ : ಸಿಗರೇಟ್ ಸೇದುತ್ತಿದ್ದ ಮಹಿಳೆಯರನ್ನು ಗುರಾಯಿಸಿ ನೋಡಿದ್ದಕ್ಕೆ ವ್ಯಕ್ತಿಯ ಹತ್ಯೆ
PC: NDTV
ನಾಗ್ಪುರ : ಸಿಗರೇಟ್ ಸೇದುತ್ತಿದ್ದ ಇಬ್ಬರು ಮಹಿಳೆಯರನ್ನು ಗುರಾಯಿಸಿ ನೋಡಿದ್ದಕ್ಕಾಗಿ 28ರ ಹರೆಯದ ವ್ಯಕ್ತಿಯನ್ನು ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಶನಿವಾರ ತಡರಾತ್ರಿ ಮಹಾಲಕ್ಷ್ಮಿ ನಗರ ಪ್ರದೇಶದಲ್ಲಿಯ ಪಾನ್ ಅಂಗಡಿಯೆದುರು ಜಯಶ್ರೀ ಪಂಝಡೆ ಮತ್ತು ಆಕೆಯ ಗೆಳತಿ ಸವಿತಾ ಸಾಯ್ರೆ ಸಿಗರೇಟ್ ಸೇದುತ್ತಿದ್ದರು. ಸಿಗರೇಟ್ ಖರೀದಿಸಲು ಅಂಗಡಿಗೆ ಬಂದಿದ್ದ ರಂಜಿತ್ ರಾಠೋಡ್ ತಮ್ಮತ್ತ ಗುರಾಯಿಸಿ ನೋಡಿದ್ದು ಮಹಿಳೆಯರನ್ನು ಕೆರಳಿಸಿತ್ತು ಮತ್ತು ಅವರ ನಡುವೆ ಬಿರುಸಾದ ವಾಗ್ವಾದ ನಡೆದಿತ್ತು.
ಜಯಶ್ರೀ ತನ್ನನ್ನು ನಿಂದಿಸುತ್ತಿದ್ದನ್ನು ಮತ್ತು ತನ್ನತ್ತ ಸಿಗರೇಟಿನ ಹೊಗೆ ಬಿಡುತ್ತಿರುವುದನ್ನು ರಾಠೋಡ್ ವೀಡಿಯೊ ಚಿತ್ರೀಕರಿಸಿದಾಗ ಈ ವಾಗ್ವಾದ ಹೊಡೆದಾಟಕ್ಕೆ ತಿರುಗಿತ್ತು. ಜಯಶ್ರೀ ಫೊನ್ ಕರೆ ಮಾಡಿ ಸ್ನೇಹಿತ ಆಕಾಶ ರಾವುತ್‌ಗೆ ಬರಲು ಹೇಳಿದ್ದಳು. ತನ್ನ ಗೆಳೆಯರೊಂದಿಗೆ ಸ್ಥಳಕ್ಕೆ ಆಗಮಿಸಿದ್ದ ರಾವುತ್ ರಂಜಿತ್‌ಗೆ ಹಲವಾರು ಬಾರಿ ಚೂರಿಯಿಂದ ಇರಿದಿದ್ದ.
ಘಟನೆಯು ಪ್ರದೇಶದಲ್ಲಿ ಅಳವಡಿಸಿದ್ದ ಸೆಕ್ಯೂರಿಟಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಸ್ಥಳಕ್ಕೆ ಧಾವಿಸಿದ ಪೋಲಿಸರು ತೀವ್ರವಾಗಿ ಗಾಯಗೊಂಡಿದ್ದ ರಾಠೋಡ್‌ನನ್ನು ಆಸ್ಪತ್ರೆಗೆ ಸೇರಿಸಿದ್ದರಾದರೂ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೋಲಿಸರು ಜಯಶ್ರೀ,ಸವಿತಾ ಮತ್ತು ರಾವುತ್‌ನನ್ನು ಬಂಧಿಸಿದ್ದಾರೆ.