ಒಡಿಶಾ: ಲಾರಿಯಲ್ಲಿ ಸಾಗಿಸುತ್ತಿದ್ದ ಸ್ಫೋಟಕ ಲೂಟಿ ಮಾಡಿದ ಶಂಕಿತ ನಕ್ಸಲೀಯರು
PC : PTI
ಭುವನೇಶ್ವರ: ಸುಂದರಗಢ ಜಿಲ್ಲೆಯ ರೂರ್ಕೆಲಾದಿಂದ ಸುಮಾರು 90 ಕಿ.ಮೀ. ದೂರದಲ್ಲಿರುವ ದುರ್ಗಮ ಹಾಗೂ ಅರಣ್ಯ ಪ್ರದೇಶದಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ ಸ್ಫೋಟಕವನ್ನು ಶಂಕಿತ ಮಾವೋವಾದಿಗಳು ಲೂಟಿ ಮಾಡಿದ್ದಾರೆ.
ಈ ಲಾರಿ ಸುಮಾರು 150 ಪ್ಯಾಕೆಟ್ ಜೆಲೆಟಿನ್ ಕಡ್ಡಿಗಳ ಪ್ಯಾಕೆಟ್ ಗಳನ್ನು ಕೊಂಡೊಯ್ಯುತ್ತಿತ್ತು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಸ್ಫೋಟಕ ತುಂಬಿದ ಲಾರಿ ಕಲ್ಲಿನ ಗಣಿ ಇರುವ ಕೆ ಬಲಾಂಗ್ ಪೊಲೀಸ್ ಠಾಣಾ ವ್ಯಾಪ್ತಿಯ ಬಂಕೊ ಪ್ರದೇಶಕ್ಕೆ ತೆರಳುತ್ತಿತ್ತು. ಸುಮಾರು 8 ಮಂದಿ ಶಸಸ್ತ್ರ ವ್ಯಕ್ತಿಗಳು ಬೆಳಗ್ಗೆ ಸುಮಾರು 10 ಗಂಟೆಗೆ ಲಾರಿಯನ್ನು ಅಪಹರಿಸಿ ಸಮೀಪದ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದಿದ್ದಾರೆ. ಅಲ್ಲಿ ಸ್ಫೋಟಕಗಳ ಪೊಟ್ಟಣಗಳನ್ನು ಇಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಾರಿಯನ್ನು ಬಂಕೊದ ಸಮೀಪ ತಡೆ ಹಿಡಿಯಲಾಯಿತು ಹಾಗೂ ಅರಣ್ಯದ ಒಳಗೆ ಒಂದು ಕಿ.ಮೀ. ದೂರ ಬಲವಂತದಿಂದ ಕೊಂಡೊಯ್ಯಲಾಯಿತು. ಅಲ್ಲಿಗೆ ತಲುಪಿದ ಬಳಿಕ ಇನ್ನೂ 10ರಿಂದ 15 ಮಂದಿಯ ಸಮ್ಮುಖದಲ್ಲಿ ಸ್ಫೋಟಕಗಳನ್ನು ಇಳಿಸಲಾಯಿತು. ಅನಂತರ ಅವರು ಆ ಪ್ಯಾಕೆಟ್ ಗಳನ್ನು ಹೊತ್ತುಕೊಂಡು ದಟ್ಟ ಅರಣ್ಯದಲ್ಲಿ ಕಣ್ಮರೆಯಾದರು ಎಂದು ಡಿಐಜಿ (ಪಶ್ಚಿಮ ವಲಯ) ಬ್ರಿಜೇಶ್ ಕುಮಾರ್ ರಾಯ್ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಇದುವರೆಗೆ ಯಾವುದೇ ಎಫ್‌ಐಆರ್ ಸ್ವೀಕರಿಸಿಲ್ಲ ಎಂದು ಎಂದು ರಾಯ್ ತಿಳಿಸಿದ್ದಾರೆ.