NCERT ರೀಡಿಂಗ್ ಮೊಡ್ಯೂಲ್‌ನಲ್ಲಿ ಚಂದ್ರಯಾನ-3 ಮಿಷನ್ ಶ್ರೇಯ ಪ್ರಧಾನಿ ಮೋದಿಗೆ; ವೇದಗಳ ಉಲ್ಲೇಖ
Photo: PTI
ಹೊಸದಿಲ್ಲಿ: ಚಂದ್ರಯಾನ ಮಿಷನ್ ಕುರಿತಂತೆ ಎನ್‌ಸಿಇಆರ್‌ಟಿ ಬಿಡುಗಡೆಗೊಳಿಸಿರುವ ವಿಶೇಷ ಪೂರಕ ರೀಡಿಂಗ್ ಮೊಡ್ಯೂಲ್‌ಗಳು ಚಂದ್ರಯಾನ ಮಿಷನ್ ಯಶಸ್ಸಿನ ಶ್ರೇಯವನ್ನು ಪ್ರಧಾನಿ ನರೇಂದ್ರ ಮೋದಿಗೆ ಸಲ್ಲಿಸಿದೆಯಲ್ಲದೆ ವಿಜ್ಞಾನ ಮತ್ತು ಪುರಾಣವನ್ನು ಜೊತೆಯಾಗಿ ಪ್ರಸ್ತುತಪಡಿಸಿದೆ ಎಂದು wire.in ವರದಿ ಮಾಡಿದೆ.
“ನಿಮಗೆ ಗೊತ್ತು, ಚಂದ್ರಯಾನ-2 ವಿಫಲವಾದ ನಂತರ ಎಲ್ಲಾ ವಿಜ್ಞಾನಿಗಳು ಆತ್ಮಸ್ಥೈರ್ಯ ಕಳೆದುಕೊಂಡಿದ್ದರು. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ನಮ್ಮ ವಿಜ್ಞಾನಿಗಳ ಆತ್ಮಸ್ಥೈರ್ಯ ಹೆಚ್ಚಿಸಿದರು ಹಾಗೂ ಇನ್ನೊಮ್ಮೆ ಪ್ರಯತ್ನಿಸುವಂತೆ ಸಲಹೆ ನೀಡಿದರು. ಎಲ್ಲಾ ವಿಜ್ಞಾನಿಗಳ ಜಂಟಿ ಪ್ರಯತ್ನದ ಫಲವಾಗಿ ಚಂದ್ರಯಾನ ಮಿಷನ್ ಭಾಗವಾಗಿ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈಯ್ಯಲ್ಲಿ ಲಾಂಚರ್ ಯಶಸ್ವಿಯಾಗಿ ಇರಿಸಿತು,” ಎಂದು ಒಂದನೇ ಮತ್ತು ಎರಡನೇ ತರಗತಿಯ ಮಕ್ಕಳಿಗಾಗಿ ಇರುವ ಸಂವಾದಾತ್ಮಕ ಮೊಡ್ಯೂಲ್‌ನಲ್ಲಿ ಹೇಳಲಾಗಿದೆ.
ಇದರಲ್ಲಿ ಚಂದ್ರಯಾನ ಮಿಷನ್ ಚಂದಿರನ ಅಂಗಳ ತಲುಪುವ ಸಂದರ್ಭದ ನೇರ ಪ್ರಸಾರದ ವೇಳೆ ಪ್ರಧಾನಿ ಕೂಡ ಸೇರಿಕೊಂಡ ಚಿತ್ರಗಳನ್ನೂ ಸೇರಿಸಲಾಗಿದ್ದು ಅವರು ಬೆಂಗಳೂರಿನ ಇಸ್ರೋ ಮುಖ್ಯ ಕಾರ್ಯಾಲಯದಲ್ಲಿ ವಿಜ್ಞಾನಿಗಳ ಜೊತೆ ಸಂವಾದ ನಡೆಸುವ ಚಿತ್ರಗಳೂ ಇವೆ.
ಈ ವಿಶೇಷ ರೀಡಿಂಗ್ ಮೊಡ್ಯೂಲ್‌ಗಳನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ದಿಲ್ಲಿಯಲ್ಲಿ ಇಸ್ರೋ ಅಧ್ಯಕ್ಷ ಎಸ್ ಪಿ ಸೋಮನಾಥ್ ಉಪಸ್ಥಿತಿಯಲ್ಲಿಬಿಡುಗಡೆಗೊಳಿಸಿದರು.
ಎರಡನೇ ತರಗತಿಯ ನಂತರದ ವಿದ್ಯಾರ್ಥಿಗಳಿಗಾಗಿರುವ ರೀಡಿಂಗ್ ಮೊಡ್ಯೂಲ್‌ನಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ಪುರಾಣ ಎರಡೂ ಸೇರಿಸಲಾಗಿದೆ. “ವೈಜ್ಞಾನಿಕ ಸಾಧನೆ ಈಗಷ್ಟೇ ನಡೆಯುತ್ತಿದೆಯೇ?... ಸಾಹಿತ್ಯದ ಪ್ರಕಾರ ವೈಮಾನಿಕ ಶಾಸ್ತ್ರದಲ್ಲೂ ಆ ವಿಚಾರವಿದೆ ಅದು ನಮ್ಮ ದೇಶ ಆ ದಿನಗಳಲ್ಲೂ ಹಾರುವ ವಾಹನಗಳನ್ನು ಹೊಂದಿತ್ತು ಎಂಬುದನ್ನು ಸೂಚಿಸುತ್ತದೆ. ವಿವಿಧ ದೇವರುಗಳು ಸಾಗುತ್ತಿದ್ದ ರಥಗಳು ಹಾರುವ ಸಾಮರ್ಥ್ಯವನ್ನೂ ಹೊಂದಿದ್ದವು ಎಂದು ವೇದಗಳಲ್ಲಿ ಉಲ್ಲೇಖವಿದೆ ಎಂದು ಅದರಲ್ಲಿ ಹೇಳಲಾಗಿದೆ. ರಾಮಾಯಣದ ರಾವಣನ ಪುಷ್ಕಕ ವಿಮಾನದ ಕುರಿತಾದ ಉಲ್ಲೇಖವನ್ನೂ ಮಾಡಲಾಗಿದೆ.