ಶಾಲಾ ಶಿಕ್ಷಣ ಮಂಡಳಿಗಳಿಗೆ ಸಮಾನವಾದ 10, 12ನೇ ತರಗತಿ ಪ್ರಮಾಣಪತ್ರ ನೀಡಲು ಎನ್‌ಸಿಆರ್‌ಟಿಗೆ ಕೇಂದ್ರದಿಂದ ಅನುಮತಿ
ಹೊಸದಿಲ್ಲಿ : ಭಾರತದ ವಿವಿಧ ಶಾಲಾ ಶಿಕ್ಷಣ ಮಂಡಳಿಗಳು ನೀಡುವ ಮಾಧ್ಯಮಿಕ (10 ನೇ ತರಗತಿ) ಮತ್ತು ಹಿರಿಯ ಮಾಧ್ಯಮಿಕ (12ನೇ ತರಗತಿ) ಶಾಲಾ ಪ್ರಮಾಣಪತ್ರಗಳಿಗೆ ಸಮಾನವಾದ ಪ್ರಮಾಣಪತ್ರಗಳನ್ನು ನೀಡುವ ಜವಾಬ್ದಾರಿಯನ್ನು ಕೇಂದ್ರ ಸರಕಾರ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಗೆ (ಎನ್‌ಸಿಆರ್‌ಟಿಗೆ) ವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಶಿಕ್ಷಣ ಸಚಿವಾಲಯದ ಅಧೀನದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸೆಪ್ಟೆಂಬರ್ 6, 2025ರಂದು ಇ-ಗೆಜೆಟ್‌ನಲ್ಲಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನಿರ್ದೇಶನದಲ್ಲಿ ನವೆಂಬರ್ 15, 2021ರ ಆದೇಶವನ್ನು ರದ್ದುಗೊಳಿಸಲಾಗಿದೆ. ಭಾರತೀಯ ವಿಶ್ವವಿದ್ಯಾಲಯಗಳ ಸಂಘಕ್ಕೆ (AIU) ನೀಡಿದ್ದ ಜವಾಬ್ದಾರಿಯನ್ನು ಎನ್‌ಸಿಆರ್‌ಟಿಗೆ ವರ್ಗಾಯಿಸಲಾಗಿದೆ.
ಹೊಸ ವ್ಯವಸ್ಥೆಯಡಿಯಲ್ಲಿ, NCERT ತನ್ನ ಜವಾಬ್ದಾರಿಯನ್ನು ರಾಷ್ಟ್ರೀಯ ಮೌಲ್ಯಮಾಪನ ಕೇಂದ್ರದ ಮೂಲಕ ನಿರ್ವಹಿಸುತ್ತದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿ 2020ರ ನಿಬಂಧನೆಗಳ ಪ್ರಕಾರ ಸ್ಥಾಪಿಸಲ್ಪಟ್ಟಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಮತ್ತು ಸರಕಾರಿ ಉದ್ಯೋಗಗಳಿಗೆ ನೇಮಕಾತಿಗಾಗಿ ಭಾರತದ ವಿವಿಧ ಶಾಲಾ ಶಿಕ್ಷಣ ಮಂಡಳಿಗಳು ನೀಡುವ 10 ಮತ್ತು 12ನೇ ತರಗತಿ ಪ್ರಮಾಣಪತ್ರಗಳಿಗೆ ಸಮಾನತೆಯ ಪ್ರಮಾಣಪತ್ರವನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.