×
Ad

ಆರಂಭಿಕ ಭಾರತೀಯ ಆವಿಷ್ಕಾರಗಳೊಂದಿಗೆ ಆಧುನಿಕ ವಿಜ್ಞಾನವನ್ನು ತಳುಕು ಹಾಕಿದ ಎನ್‌ಸಿಇಆರ್‌ಟಿ ಪುಸ್ತಕ

Update: 2025-07-15 16:44 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎನ್‌ಸಿಇಆರ್‌ಟಿ)ಯ 8ನೇ ತರಗತಿಯ ನೂತನ ವಿಜ್ಞಾನ ಪಠ್ಯಪುಸ್ತಕವು ಪ್ರಾಚೀನ ತತ್ವಜ್ಞಾನಿ ಆಚಾರ್ಯ ಕಣಾದರ ‘ಪರಮಾಣು’ ಪರಿಕಲ್ಪನೆಯಿಂದ ಹಿಡಿದು ಗಣಿತಜ್ಞ 2ನೇ ಭಾಸ್ಕರ್ ಅವರ ‘ವಾಟರ್ ಬೌಲ್(ನೀರಿನ ಬಟ್ಟಲು)’ ಖಗೋಳಶಾಸ್ತ್ರ ತಂತ್ರಗಳವರೆಗೆ ಭಾರತೀಯ ವೈಜ್ಞಾನಿಕ ಜ್ಞಾನ ಮತ್ತು ಆವಿಷ್ಕಾರಗಳಿಗೆ ಮೀಸಲಾದ ವಿಭಾಗಗಳನ್ನು ಒಳಗೊಂಡಿದೆ ಎಂದು hindustantimes.com ವರದಿ ಮಾಡಿದೆ.

ಕಂಚಿನಂತಹ ಮಿಶ್ರಲೋಹಗಳ ಔಷಧೀಯ ಬಳಕೆ, ಆಯುರ್ವೇದ ಔಷಧಿ ಸೂತ್ರೀಕರಣಗಳಲ್ಲಿ ನೀರು ಮತ್ತು ತೈಲಗಳಂತಹ ನೈಸರ್ಗಿಕ ದ್ರಾವಕಗಳ ಬಳಕೆ ಮತ್ತು ಆಧುನಿಕ ಲಸಿಕೆಗಳ ಆವಿಷ್ಕಾರಕ್ಕೆ ಮೊದಲು ಸಿಡುಬನ್ನು ಎದುರಿಸಲು ಬಳಕೆಯಾಗುತ್ತಿದ್ದ ಸಾಂಪ್ರದಾಯಿಕ ‘ವ್ಯತ್ಯಯನ(ಸಿಡುಬು ವಿಷ ಚುಚ್ಚುಮದ್ದು)’ವಿಧಾನವನ್ನೂ ಪುಸ್ತಕವು ಉಲ್ಲೇಖಿಸಿದೆ.

ಪುಸ್ತಕವು ‘ಎಂದಾದರೂ ಕೇಳಿದ್ದೀರಾ?’ ಮತ್ತು ‘ನಮ್ಮ ವೈಜ್ಞಾನಿಕ ಪರಂಪರೆ’ ಶೀರ್ಷಿಕೆಗಳ ವಿಭಾಗಗಳನ್ನು ಹೊಂದಿದ್ದು, ಇವು ಆಧುನಿಕ ವೈಜ್ಞಾನಿಕ ಪರಿಕಲ್ಪನೆಗಳನ್ನು ಆರಂಭಿಕ ಭಾರತೀಯ ಆವಿಷ್ಕಾರಗಳೊಂದಿಗೆ ತಳುಕು ಹಾಕಿವೆ. ಮೊದಲನೆಯದು ಪ್ರಾಚೀನ ಭಾರತೀಯ ಪಠ್ಯಗಳಿಂದ ಆಕರ್ಷಕ ವಿಷಯಗಳು ಮತ್ತು ಅವಲೋಕನಗಳ ಮೂಲಕ ವಿದ್ಯಾರ್ಥಿಗಳ ಆಸಕ್ತಿಗಳನ್ನು ಹಿಡಿದಿಟ್ಟುಕೊಳ್ಳುವ ಗುರಿಯನ್ನು ಹೊಂದಿದ್ದರೆ,ಎರಡನೆಯದು ವೈಜ್ಞಾನಿಕ ಮನೋಭಾವದ ಬೆಳವಣಿಗೆಗೆ ಕೊಡುಗೆಗಳನ್ನು ನೀಡಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳ ಕುರಿತು ಮಾಹಿತಿಗಳನ್ನು ಒದಗಿಸುತ್ತದೆ.

‘‘ಅ.2,1996ರಂದು ಬಿಡುಗಡೆಗೊಂಡಿದ್ದ ‘ಲರ್ನಿಂಗ್:ದಿ ಟ್ರೆಜರ್ ವಿಥಿನ್’ ಶೀರ್ಷಿಕೆಯ ವರದಿಯಲ್ಲಿ ಯುನೆಸ್ಕೋ, 21ನೇ ಶತಮಾನದಲ್ಲಿ ಪ್ರತಿಯೊಂದು ದೇಶದಲ್ಲಿ ಶಿಕ್ಷಣವು ಸಂಸ್ಕೃತಿಯಲ್ಲಿ ಬೇರೂರಿರಬೇಕು ಮತ್ತು ಬೆಳವಣಿಗೆಗೆ ಬದ್ಧವಾಗಿರಬೇಕು ಎಂದು ಹೇಳಿದೆ. ಇದು ‘ತಾಜಾ ಗಾಳಿಗಾಗಿ ನಾನು ನನ್ನ ಕಿಟಕಿಗಳು ಮತ್ತು ಬಾಗಿಲುಗಳನ್ನು ತೆರೆದಿಡುತ್ತೇನೆ,ಆದರೆ ನನ್ನ ಮನೆಯು ಹಾರಿಹೋಗಲು ಬಿಡುವುದಿಲ್ಲ’ ಎಂಬ ಮಹಾತ್ಮಾ ಗಾಂಧಿಯವರ ಚಿಂತನೆಗೆ ಅನುಗುಣವಾಗಿದೆ. ಇದರರ್ಥ ಧನಾತ್ಮಕ ಬದಲಾವಣೆಯನ್ನುಂಟು ಮಾಡುವ ಕೌಶಲ್ಯಗಳು ಮತ್ತು ಜ್ಞಾನದ ಮೇಲೆ ಗಮನವನ್ನು ಕೇಂದ್ರೀಕರಿಸುವ ಜೊತೆಗೆ ಸಾಂಸ್ಕೃತಿಕ ಮೌಲ್ಯಗಳು ಮತ್ತು ದೃಷ್ಟಿಕೋನಗಳನ್ನು ಕಲಿಕೆಯೊಂದಿಗೆ ಸಂಯೋಜಿಸಬೇಕು. ನಮ್ಮ ವಿದ್ಯಾರ್ಥಿಗಳಿಗೆ ನಮ್ಮ ಹಿಂದಿನ ಸಂಪ್ರದಾಯಗಳು,ಇತಿಹಾಸಗಳು ಮತ್ತು ವೈಜ್ಞಾನಿಕ ಆವಿಷ್ಕಾರಗಳು ತಿಳಿದಿರಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ 2020)ಯೂ ಹೇಳುತ್ತದೆ ಮತ್ತು ಎನ್‌ಸಿಇಆರ್‌ಟಿ ತನ್ನ ಪುಸ್ತಕದಲ್ಲಿ ಭಾರತೀಯ ವೈಜ್ಞಾನಿಕ ಆವಿಷ್ಕಾರಗಳು ಮತ್ತು ತಂತ್ರಗಳನ್ನು ಸೇರ್ಪಡೆಗೊಳಿಸುವ ಮೂಲಕ ಒಳ್ಳೆಯ ಕಾರ್ಯವನ್ನು ಮಾಡಿದೆ’’ ಎಂದು ಶಿಕ್ಷಣತಜ್ಞ ಹಾಗೂ ಮಾಜಿ ಎನ್‌ಸಿಇಆರ್‌ಟಿ ನಿರ್ದೇಶಕ ಜೆ.ಎಸ್.ರಾಜಪೂತ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎನ್‌ಇಪಿ ಮತ್ತು ರಾಷ್ಟ್ರೀಯ ಶಾಲಾ ಶಿಕ್ಷಣ ಪಠ್ಯಕ್ರಮ ಚೌಕಟ್ಟು(ಎನ್‌ಸಿಎಫ್‌ಎಸ್‌ಇ) 2023ಕ್ಕೆ ಅನುಗುಣವಾಗಿರುವ 228 ಪುಟಗಳ ನೂತನ ಪಠ್ಯಪುಸ್ತಕವು 13 ಅಧ್ಯಾಯಗಳನ್ನು ಹೊಂದಿದೆ.

ಪುಸ್ತಕವು ‘ವಿಜ್ಞಾನಿಯಾಗಿರಿ’ ಎಂಬ ವಿಭಾಗವನ್ನೂ ಒಳಗೊಂಡಿದ್ದು,ಇದು ವಿಕ್ರಮ ಸಾರಾಭಾಯಿ,ಮೇಘನಾದ ಸಹಾ,ಅಸೀಮಾ ಚಟರ್ಜಿ,ಕಮಲ ರಣದಿವೆ ಮತ್ತು ಮಹಾರಾಜ ಕಿಶನ್ ಭಾನ್ ಸೇರಿದಂತೆ ಭಾರತೀಯ ವಿಜ್ಞಾನಿಗಳ ಕೊಡುಗೆಗಳನ್ನು ವಿವರಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News