ಕೋವಿಡ್ ಸಾವಿನ ಬಗ್ಗೆ ಎನ್‌ಸಿಇಆರ್‌ಟಿ ಮೌನ, ಪ್ರಧಾನಿ ಮೋದಿಗೆ ಶ್ಲಾಘನೆ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಸಿದ್ಧಪಡಿಸಿರುವ ಕೋವಿಡ್-19 ಕುರಿತ ಮಾಡ್ಯೂಲ್‌ಗಳು, ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವನ್ನು ವೈಭವೀಕರಿಸುತ್ತವೆ. ಆದರೆ ಸಾವಿನ ಸಂಖ್ಯೆಯ ಬಗ್ಗೆ ಯಾವುದೇ ಉಲ್ಲೇಖವನ್ನು ಹೊಂದಿಲ್ಲ ಎಂದು The Telegraph ವರದಿಯು ತಿಳಿಸಿದೆ.
ಎನ್‌ಸಿಆರ್‌ಟಿ ಪ್ರಿಸ್ಕೂಲ್‌ನಿಂದ 2ನೇ ತರಗತಿ, 3 ರಿಂದ 5ನೇ ತರಗತಿ, 6 ರಿಂದ 8ನೇ ತರಗತಿ ಮತ್ತು 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಹೆಚ್ಚುವರಿ ವಿಷಯವಾಗಿ ನಾಲ್ಕು ಮಾಡ್ಯೂಲ್‌ಗಳನ್ನು ಹೊರತಂದಿದೆ.
2021ರಲ್ಲಿ ಬಿಡುಗಡೆಯಾದ ಅಧಿಕೃತ ದತ್ತಾಂಶಕ್ಕಿಂತ ಆರು ಪಟ್ಟು ಹೆಚ್ಚು ಕೋವಿಡ್ ಸಾವುಗಳು ಸಂಭವಿಸಿವೆ ಎಂದು ಇತ್ತೀಚಿನ ದತ್ತಾಂಶಗಳು ಬಹಿರಂಗಪಡಿಸುತ್ತಿರುವ ಮಧ್ಯೆ ಈ ಮಾಡ್ಯೂಲ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಮೇ 7ರಂದು ಪ್ರಕಟವಾದ Civil Registration System ದತ್ತಾಂಶವು 2021ರಲ್ಲಿ ಸುಮಾರು 21 ಲಕ್ಷಕ್ಕಿಂತ ಅಧಿಕ ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ಹೇಳುತ್ತಿದೆ. ಆ ವರ್ಷ 3.3 ಲಕ್ಷ ಜನರು ವೈರಸ್‌ನಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಸರಕಾರ ಹೇಳಿತ್ತು.
ಮಧ್ಯಮ ಶಾಲಾ ವಿದ್ಯಾರ್ಥಿಗಳ(6 ರಿಂದ 8 ತರಗತಿಗಳು) ಮಾಡ್ಯೂಲ್ "ಕೋವಿಡ್ -19 ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಭಾರತೀಯ ದೃಷ್ಟಿಕೋನ", ಮಾರ್ಚ್ 19, 2020ರಂದು ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಮಾರ್ಚ್ 22ರಂದು ಬೆಳಿಗ್ಗೆ 7ರಿಂದ ರಾತ್ರಿ 9 ರವರೆಗೆ "ಜನತಾ ಕರ್ಫ್ಯೂ" ವಿಧಿಸಿದರು. ವೇಗವಾಗಿ ಹರಡುವ ವೈರಸ್ ಅನ್ನು ನಿಯಂತ್ರಿಸಲು ಕೆಲವು ಕ್ರಮಗಳನ್ನು ಅನುಸರಿಸಲು ಅವರು ನಾಗರಿಕರನ್ನು ವಿನಂತಿಸಿದರು ಎಂದು ಹೇಳುತ್ತದೆ.
2020ರ ಮಾರ್ಚ್ 24ರಂದು ಮೋದಿ 21 ದಿನಗಳ ಲಾಕ್‌ಡೌನ್ ಘೋಷಿಸಿದ್ದರು. ಲಾಕ್‌ಡೌನ್ ಕೋವಿಡ್ -19 ಹರಡುವಿಕೆಯನ್ನು ನಿಯಂತ್ರಿಸಿತು. ಹಲವು ಬಾರಿ ಲಾಕ್ ಡೌನ್ ವಿಸ್ತರಿಸಲಾಯಿತು. ಭಾರತೀಯ ವಿಜ್ಞಾನಿಗಳು ಕಡಿಮೆ ಅವಧಿಯಲ್ಲಿ ಕೋವಿಡ್ -19 ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ವಿಜ್ಞಾನಿಗಳನ್ನು ಶ್ಲಾಘಿಸಿದರು ಮತ್ತು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದರು. ಲಾಕ್‌ಡೌನ್‌ನಿಂದಾದ ಆರ್ಥಿಕ ಪರಿಣಾಮವನ್ನು ಸರಿದೂಗಿಸಲು ಮೋದಿ ಪ್ಯಾಕೇಜ್ ಘೋಷಿಸಿದರು ಎಂದು ಮಾಡ್ಯೂಲ್ ಹೇಳುತ್ತದೆ. ಆದರೆ, ಜನರು ಎದುರಿಸಿದ ಸಮಸ್ಯೆಗಳ ಬಗ್ಗೆ ಸರಿಯಾಗಿ ಉಲ್ಲೇಖವನ್ನು ಮಾಡಿಲ್ಲ ಎಂದು ವರದಿಯು ತಿಳಿಸಿದೆ.