×
Ad

ಎರಡನೆಯ ಬಾರಿ ಸಂಸದ ಸ್ಥಾನದಿಂದ ಅನರ್ಹಗೊಂಡ ಮುಹಮ್ಮದ್ ಫೈಝಲ್

Update: 2023-10-05 13:45 IST

ಮುಹಮ್ಮದ್ ಫೈಝಲ್ (PTI)

ತಿರುವನಂತಪುರಂ: ಹತ್ಯಾ ಪ್ರಕರಣದಲ್ಲಿನ ತಮ್ಮ ಶಿಕ್ಷೆಯನ್ನು ಅಮಾನತುಗೊಳಿಸಬೇಕು ಎಂದು ಎನ್ಸಿಪಿ ನಾಯಕ ಹಾಗೂ ಸಂಸದ ಮುಹಮ್ಮದ್ ಫೈಝಲ್ ಪಿ.ಪಿ. ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ. ಇದರಿಂದಾಗಿ ಅವರು ಮತ್ತೊಮ್ಮೆ ಲೋಕಸಭಾ ಸದಸ್ಯತ್ವದಿಂದ ಬುಧವಾರ ಅನರ್ಹಗೊಂಡಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಕುರಿತು ಲೋಕಸಭಾ ಕಾರ್ಯಾಲಯವು ಹೊರಡಿಸಿರುವ ವಾರ್ತಾಪತ್ರದಲ್ಲಿ, “ಅಕ್ಟೋಬರ್ 3, 2023ರಂದು ಗೌರವಾನ್ವಿತ ಕೇರಳ ಹೈಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದ ಲಕ್ಷದ್ವೀಪ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮುಹಮ್ಮದ್ ಫೈಝಲ್ ಪಿ.ಪಿ. ಅವರ ಸಂಸದ ಸ್ಥಾನವು ಶಿಕ್ಷೆಗೆ ಗುರಿಯಾದ ದಿನದಿಂದ ಅರ್ಥಾತ್, ಜನವರಿ 11, 2023ರಿಂದ ಅನರ್ಹಗೊಂಡಿದೆ.” ಎಂದು ಹೇಳಲಾಗಿದೆ.

ಲೋಕಸಭಾ ಸದಸ್ಯತ್ವದಿಂದ ಮುಹಮ್ಮದ್ ಫೈಝಲ್ ಅನರ್ಹಗೊಳ್ಳುತ್ತಿರುವುದು ಇದು ಎರಡನೆಯ ಬಾರಿಯಾಗಿದೆ.

ಇದಕ್ಕೂ ಮುನ್ನ, ಜನವರಿ 25ರಂದು ಕವರಟ್ಟಿ ಸೆಷನ್ಸ್ ನ್ಯಾಯಾಲಯವು ಮುಹಮ್ಮದ್ ಫೈಝಲ್ ಹಾಗೂ ಇನ್ನಿತರ ಮೂವರ ವಿರುದ್ಧ ದಾಖಲಾಗಿದ್ದ ಕೊಲೆ ಪ್ರಕರಣವನ್ನು ಎತ್ತಿ ಹಿಡಿದು, ಎಲ್ಲ ಆರೋಪಿಗಳಿಗೆ 10 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿತ್ತು. ಆ ದಿನದಿಂದಲೇ ಮುಹಮ್ಮದ್ ಫೈಝಲ್ ಅವರ ಲೋಕಸಭಾ ಸದಸ್ಯತ್ವವೂ ಅನರ್ಹಗೊಂಡಿತ್ತು.

ಫೈಝಲ್ ವಿರುದ್ಧದ ತೀರ್ಪು ಹಾಗೂ ಪ್ರಕರಣದಲ್ಲಿನ ಶಿಕ್ಷೆಯನ್ನು ಕೇರಳ ಹೈಕೋರ್ಟ್ ಅಮಾನತುಗೊಳಿಸಿದ ತಿಂಗಳ ನಂತರ ಮುಹಮ್ಮದ್ ಫೈಝಲ್ ರ ಲೋಕಸಭಾ ಸದಸ್ಯತ್ವ ಅನರ್ಹತೆಯನ್ನು ತೆರವುಗೊಳಿಸಲಾಗಿತ್ತು.

ಈ ತೀರ್ಪಿನ ವಿರುದ್ಧ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶವು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯನ್ನು ಆಧರಿಸಿ ಆಗಸ್ಟ್, 2023ರಲ್ಲಿ ಕೇರಳ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News