ಅಂಬೇಡ್ಕರ್ ಗೆ ಭಾರತ ರತ್ನ ನೀಡಲು ನೆಹರೂ ನಿರಾಕರಿಸಿದ್ದರು: ಪ್ರಲ್ಹಾದ್ ಜೋಶಿ ವಿವಾದಾತ್ಮಕ ಹೇಳಿಕೆ
ತಿರುವನಂತಪುರಂ: ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಲು ನಿರಾಕರಿಸಿದ್ದರು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಪಾದಿಸಿದ್ದಾರೆ.
ಆದರೆ ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಅಂಬೇಡ್ಕರ್ ಅವರನ್ನು ಸೋಲಿಸಿದ್ದ ಕಜ್ರೋಲ್ಕರ್ ನಾರಾಯಣರಾವ್ ಸದೋಬಾ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಕಾಂಗ್ರೆಸ್ ಸರ್ಕಾರ ನೀಡಿತ್ತು. ವಿ.ಪಿ.ಸಿಂಗ್ ಸರ್ಕಾರದ ಮೇಲೆ ಬಿಜೆಪಿ ಒತ್ತಡ ಹಾಕಿದ ಬಳಿಕ ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಯಿತು ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಆಯೋಜಿಸಿದ್ದ 'ಸಂವಿಧಾನ ಹೆಮ್ಮೆಯ ದಿನ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನದ ವಿರುದ್ಧ ಬಿಜೆಪಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಎಲ್ಲೆಡೆ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ ಎಂದರು.
ಅಂಬೇಡ್ಕರ್ ಅವರ ಎದುರು ನೆಹರೂ ಅವರಿಗೆ ಕೀಳರಿಮೆಯ ಭಾವನೆ ಇತ್ತು. "ನೆಹರೂ ನೇತೃತ್ವದ ಮೊದಲ ಮಧ್ಯಂತರ ಸಚಿವ ಸಂಪುಟದಲ್ಲಿ ಅಂಬೇಡ್ಕರ್ ಅವರನ್ನು ಸೇರಿಸಿಕೊಂಡಿರಲಿಲ್ಲ. ಮಹಾತ್ಮಾಗಾಂಧಿಯವರ ಒತ್ತಾಯದ ಬಳಿಕ ಸಂಪುಟಕ್ಕೆ ಅಂಬೇಡ್ಕರ್ ಅವರನ್ನು ಸೇರಿಸಿಕೊಳ್ಳಲಾಯಿತು ಎಂದರು.
ಸಂಪುಟಕ್ಕೆ ರಾಜೀನಾಮೆ ನೀಡಿದವರಲ್ಲಿ ಅಂಬೇಡ್ಕರ್ ಮೊದಲಿಗರು. 1952ರಲ್ಲಿ ಅಂಬೇಡ್ಕರ್ ಮುಂಬೈನಿಂದ ಸ್ಪರ್ಧಿಸಿದಾಗ ಅವರ ವಿರುದ್ಧ ಪ್ರಚಾರಕ್ಕೆ ನೆಹರೂ ಎರಡು ಬಾರಿ ಬಂದಿದ್ದರು. ನೆಹರೂ-ಎಸ್.ಕೆ.ಪಾಟೀಲ್-ಎಸ್.ಎ.ಡಾಂಗೆ ಅವರು ಅಂಬೇಡ್ಕರ್ ವಿರುದ್ಧ ಕೆಲಸ ಮಾಡಿದರು. ಇದೀಗ ಅವರು ಅಂಬೇಡ್ಕರ್ ವಿರುದ್ಧ ಬಿಜೆಪಿ ಕೆಲಸ ಮಾಡುತ್ತಿದೆ ಎಂಬ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಅಂಬೇಡ್ಕರ್ ಮೃತಪಟ್ಟಾಗ ನವದೆಹಲಿಯಲ್ಲಿ ಪಾರ್ಥಿವ ಶರೀರದ ಅಂತ್ಯಸಂಸ್ಕಾರಕ್ಕೆ ನೆಹರೂ ಅವಕಾಶ ನೀಡಲಿಲ್ಲ. ಬಳಿಕ ಮುಂಬೈಗೆ ಒಯ್ಯಲಾಯಿತು.ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕೆ ನೆರವು ನೀಡಲು ಕೂಡಾ ನೆಹರೂ ನಿರಾಕರಿಸಿದ್ದರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ಧಾರೆ.