×
Ad

ನೇಪಾಳ | ಕಗ್ಗಂಟಾದ ಮಧ್ಯಂತರ ಪ್ರಧಾನಿ ಆಯ್ಕೆ : ಪ್ರತಿಭಟನಾಕಾರರ ಎರಡು ಬಣಗಳ ನಡುವೆ ಹೊಡೆದಾಟ

Update: 2025-09-11 22:31 IST

PC : hindustantimes.com

ಕಠ್ಮಂಡು, ಸೆ.11: ನೇಪಾಳದಲ್ಲಿ ಮಧ್ಯಂತರ ಪ್ರಧಾನಿಯನ್ನು ಆಯ್ಕೆ ಮಾಡುವ ವಿಷಯದಲ್ಲಿ ಪ್ರತಿಭಟನಾಕಾರರ ಎರಡು ಬಣಗಳ ನಡುವಿನ ವಿವಾದ ತಾರಕಕ್ಕೆ ಏರಿದ್ದು ಗುರುವಾರ ನೇಪಾಳ ಸೇನಾಪಡೆಯ ಕೇಂದ್ರ ಕಚೇರಿಯ ಎದುರುಗಡೆ ಉಭಯ ಬಣಗಳ ಸದಸ್ಯರು ಕೈಕೈ ಮಿಲಾಯಿಸಿರುವುದಾಗಿ ವರದಿಯಾಗಿದೆ.

ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಬೆಂಬಲಿಸುವ ಪ್ರತಿಭಟನಾಕಾರರ ಬಣ ಹಾಗೂ ಕಠ್ಮಂಡು ಮೇಯರ್ ಬಲೆನ್ ಶಾ ಅವರನ್ನು ಬೆಂಬಲಿಸುವ ಬಣಗಳ ಸದಸ್ಯರು ಸೇನೆಯ ಕೇಂದ್ರಕಚೇರಿಯ ಹೊರಗಡೆ ಘರ್ಷಣೆ ನಡೆಸಿದ್ದಾರೆ.

ರಾಜಕೀಯ ರಂಗದಲ್ಲಿ ಬದಲಾವಣೆಗೆ ಆಗ್ರಹಿಸುತ್ತಿರುವ ಪ್ರತಿಭಟನಾಕಾರರ ನಡುವೆ ಈಗ ಮಧ್ಯಂತರ ಪ್ರಧಾನಿಯನ್ನು ಆಯ್ಕೆ ಮಾಡುವ ವಿಷಯದಲ್ಲಿ ತೀವ್ರ ಭಿನ್ನಮತ ತಲೆದೋರಿದೆ. ಸಾಮಾಜಿಕ ಮಾಧ್ಯಮಗಳ ಮೇಲೆ ನಿಷೇಧ ವಿಧಿಸಿರುವುದನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯಲ್ಲಿ ಯುವಜನರ ತಂಡ ಯಶಸ್ವಿಯಾಗಿತ್ತು. ಆದ್ದರಿಂದ ಮಧ್ಯಂತರ ಪ್ರಧಾನಿಯನ್ನು ಒಮ್ಮತದಿಂದ ಆಯ್ಕೆ ಮಾಡಿ ಮಾಹಿತಿ ನೀಡುವಂತೆ ಸೇನಾಧಿಕಾರಿಗಳು ಪ್ರತಿಭಟನಾಕಾರರ ಗುಂಪಿಗೆ ಸೂಚಿಸಿದ್ದರು.

ಗುರುವಾರ ಸೇನಾ ಕಚೇರಿಯ ಎದುರುಗಡೆ ಎರಡು ಗುಂಪುಗಳ ಸದಸ್ಯರು ಮಧ್ಯಂತರ ನಾಯಕತ್ವದ ಬಗ್ಗೆ ಚರ್ಚೆ ನಡೆಸುತ್ತಿದ್ದ ಸಂದರ್ಭ ಒಂದು ಗುಂಪು ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿಯನ್ನು ವಿರೋಧಿಸಿ ಘೋಷಣೆ ಕೂಗಿದೆ. ಆಗ ಸುಶೀಲಾ ಕರ್ಕಿ, ಬಲೆನ್ ಶಾ ಹಾಗೂ ಧರನ್ ನಗರದ ಮೇಯರ್ ಹರ್ಕಾ ಸಂಪಂಗ್‍ರನ್ನು ಬೆಂಬಲಿಸುವ ತಂಡಗಳ ನಡುವೆ ಮಾತಿನ ಚಕಮಕಿ ಆರಂಭಗೊಂಡಿದೆ. ವಾಗ್ವಾದ ತೀವ್ರಗೊಂಡು ಎರಡು ಬಣಗಳ ಸದಸ್ಯರು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ಫೋಟೋವನ್ನು `ಖಬರ್‍ಹಬ್' ಸುದ್ದಿಸಂಸ್ಥೆ ಪ್ರಕಟಿಸಿದೆ. ಘರ್ಷಣೆ ತೀವ್ರಗೊಂಡಾಗ ಸೇನೆ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದೆ. ಸೇನಾ ಮುಖ್ಯಸ್ಥ ಜನರಲ್ ಅಶೋಕ್ ರಾಜ್ ಸಿದ್ಗೆಲ್ ಮಧ್ಯಂತರ ಪ್ರಧಾನಿಯ ಆಯ್ಕೆ ಕುರಿತು ಬುಧವಾರ ರಾತ್ರಿ ಪ್ರತಿಭಟನಾಕಾರರ ಮುಖಂಡರು ಹಾಗೂ ಪ್ರಮುಖ ವ್ಯಕ್ತಿಗಳ ಜೊತೆ ಮಾತುಕತೆ ನಡೆಸಿದ್ದರು ಎಂದು ಎಂದು ವರದಿಯಾಗಿದೆ.

ಕುಲ್ಮನ್ ಘಿಸಿಂಗ್ ಹೆಸರು ಮುನ್ನೆಲೆಗೆ

ಮಧ್ಯಂತರ ಪ್ರಧಾನಿಯ ರೇಸ್‍ನಿಂದ ಕಠ್ಮಂಡು ಮೇಯರ್ ಬಲೆನ್ ಶಾ ಮತ್ತು ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ದೂರ ಸರಿದ ಹಿನ್ನೆಲೆಯಲ್ಲಿ ಈ ಹುದ್ದೆಗೆ ನೇಪಾಳ ವಿದ್ಯುತ್ ಪ್ರಾಧಿಕಾರದ ಮಾಜಿ ಮುಖ್ಯಸ್ಥ ಕುಲ್ಮನ್ ಘಿಸಿಂಗ್ ಅವರ ಹೆಸರನ್ನು ಪ್ರತಿಭಟನಾಕಾರರ ಗುಂಪು ಸೂಚಿಸಿರುವುದಾಗಿ ವರದಿಯಾಗಿದೆ.

`ಕ್ಲೀನ್ ಇಮೇಜ್' ಹೊಂದಿರುವ ಘಿಸಿಂಗ್ ಉತ್ತಮ ಆಡಳಿತಗಾರನಾಗಿದ್ದು ತಮ್ಮ ಅಧಿಕಾರಾವಧಿಯಲ್ಲಿ ನೇಪಾಳದ ವಿದ್ಯುತ್ ಸಮಸ್ಯೆಯನ್ನು ಕೊನೆಗೊಳಿಸಿ ಜನಪ್ರಿಯರಾಗಿದ್ದರು. ಹೊಸದಾಗಿ ಚುನಾವಣೆ ನಡೆಯುವವರೆಗೆ ಅವರು ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಪ್ರತಿಭಟನಾಕಾರರ ಗುಂಪು ಪ್ರತಿಪಾದಿಸಿದೆ.

ನೇಪಾಳದಲ್ಲಿ ಪ್ರತಿಭಟನೆಯ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದ್ದ ಯುವಜನರ ತಂಡದಲ್ಲಿ ಈಗ ಮಧ್ಯಂತರ ಪ್ರಧಾನಿಯ ಆಯ್ಕೆಯ ವಿಷಯದಲ್ಲಿ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ಪ್ರತಿಭಟನಾಕಾರರ ಒಗ್ಗಟ್ಟನ್ನು ಮುರಿದು ವಿಭಜಿಸುವ ಪ್ರಯತ್ನ ನಡೆದಿದೆ ಎಂದು ಪ್ರತಿಭಟನಾಕಾರರ ಮುಖಂಡ ದಿವಾಕರ್ ದಂಗಾಲ್ ಆರೋಪಿಸಿದ್ದಾರೆ.

ದೇಶದ ನಾಯಕತ್ವದ ಹೊಣೆ ವಹಿಸಿಕೊಳ್ಳಲು ತಾವಿನ್ನೂ ಸಮರ್ಥರಾಗಿಲ್ಲ. ನಾಯಕತ್ವ ವಹಿಸಿಕೊಳ್ಳುವಷ್ಟು ಪ್ರಬುಧ್ದರಾಗಲು ನಮಗೆ ಇನ್ನಷ್ಟು ಸಮಯಾವಕಾಶದ ಅಗತ್ಯವಿದೆ. ನಮ್ಮನ್ನು ವಿಭಜಿಸುವ ಪ್ರಯತ್ನ ನಡೆದಿದೆ. ಕೆಲವು ಪಕ್ಷಗಳ ಸದಸ್ಯರು ನಮ್ಮ ಗುಂಪಿನೊಳಗೆ ಪ್ರವೇಶಿಸಿ ನಮ್ಮಲ್ಲಿ ಬಿರುಕು ಮೂಡಿಸಬಹುದು ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ. ಹಳೆಯ ನಾಯಕರಿಂದಾಗಿ ಈ ರಕ್ತಪಾತ ನಡೆದಿದೆ. ನಾವು ಸಂಸತ್ತನ್ನು ವಿಸರ್ಜಿಸಲು ಬಯಸಿದ್ದೇವೆ, ಸಂವಿಧಾನವನ್ನು ರದ್ದುಪಡಿಸಲು ಅಲ್ಲ ಎಂದವರು ಹೇಳಿದ್ದಾರೆ. `ನಾವು ಸಂವಿಧಾನವನ್ನು ಬದಲಾಯಿಸಲು ಪ್ರಯತ್ನಿಸುತ್ತಿಲ್ಲ, ಆದರೆ ಸಂವಿಧಾನಕ್ಕೆ ಅಗತ್ಯವಾದ ಬದಲಾವಣೆ ಬಯಸಿದ್ದೇವೆ. ಮುಂದಿನ 6 ತಿಂಗಳೊಳಗೆ ಚುನಾವಣೆ ಬಯಸಿದ್ದೇವೆ' ಎಂದು ಮತ್ತೊಬ್ಬ ಮುಖಂಡ ಅನಿಲ್ ಬನಿಯಾ ಹೇಳಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News