KIIT ಸಂಸ್ಥೆಯಲ್ಲಿ ನೇಪಾಳಿ ವಿದ್ಯಾರ್ಥಿನಿ ಆತ್ಮಹತ್ಯೆ: ಭಾರತೀಯ ರಾಯಭಾರ ಕಚೇರಿಯಿಂದ ತನಿಖೆಯ ಭರವಸೆ
ಹೊಸದಿಲ್ಲಿ: ಒಡಿಶಾದ ಕಳಿಂಗ ಕೈಗಾರಿಕಾ ತಂತ್ರಜ್ಞಾನ ಸಂಸ್ಥೆ(KIIT)ಯಲ್ಲಿ ನೇಪಾಳಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಕುರಿತು ಅಳವಾದ ತನಿಖೆ ನಡೆಸಲಾಗುವುದು ಎಂದು ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿ ಭರವಸೆ ನೀಡಿದ್ದು, ವಿದ್ಯಾರ್ಥಿಗಳು ಕ್ಯಾಂಪಸ್ ಗೆ ಮರಳಬೇಕು ಎಂದು ಮನವಿ ಮಾಡಿದೆ.
ಭುವನೇಶ್ವರದ ಕಳಿಂಗ ಕೈಗಾರಿಕಾ ತಂತ್ರಜ್ಞಾನ ಸಂಸ್ಥೆಯಲ್ಲಿ ಮೂರನೆ ವರ್ಷದ ಬಿಟೆಕ್ ಪದವಿ ವಿದ್ಯಾರ್ಥಿನಿಯಾಗಿದ್ದ ಪ್ರಕೃತಿ ಲಮ್ಸಾಲ್ ಎಂಬ ಯುವತಿ ರವಿವಾರ ವಿದ್ಯಾರ್ಥಿ ನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಘಟನೆಯ ಬೆನ್ನಿಗೇ, ಸುಮಾರು 1,000 ನೇಪಾಳಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ಸಂಸ್ಥೆಯ ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಗಿಳಿದಿದ್ದರು.
ಇದಲ್ಲದೆ, ನೇಪಾಳಿ ವಿದ್ಯಾರ್ಥಿಗಳ ಗುಂಪೊಂದು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯೆದುರು ಭಿತ್ತಿಫಲಕಗಳೊಂದಿಗೆ ಪ್ರತಿಭಟನೆ ನಡೆಸಿ, ಘಟನೆಯ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿತ್ತು.
ಪ್ರತಿಭಟನೆಯಿಂದ ಸಂಸ್ಥೆಯ ಆವರಣದಲ್ಲಿನ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ, ಕಳಿಂಗ ಕೈಗಾರಿಕಾ ತಂತ್ರಜ್ಞಾನ ಸಂಸ್ಥೆಯ ಅಧಿಕಾರಿಗಳು ಕೆಲವು ನೇಪಾಳಿ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ನಿಲಯದಿಂದ ತೆರವುಗೊಳಿಸಿ, ಅವರ ಪ್ರಯಾಣಕ್ಕೆ ಯಾವುದೇ ವ್ಯವಸ್ಥೆ ಮಾಡದೆ, ಅವರನ್ನೆಲ್ಲ ಕಟಕ್ ರೈಲ್ವೆ ನಿಲ್ದಾಣದ ಬಳಿ ಬಿಟ್ಟು ಹೋಗಿದ್ದರು ಎಂದು ಆರೋಪಿಸಲಾಗಿದೆ.
ತಮ್ಮ ಪುತ್ರಿಯ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಲಮ್ಸಾಲ್ ರ ತಂದೆ ಸುನೀಲ್ ಲಮ್ಸಾಲ್, ಈ ಖಾಸಗಿ ಇಂಜಿನಿಯರಿಂಗ್ ಸಂಸ್ಥೆಯು ನೆರೆ ದೇಶದ ಪದವೀಧರ ವಿದ್ಯಾರ್ಥಿಗಳನ್ನು ಅನುಚಿತವಾಗಿ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. “ನಾನು ನನ್ನ ಪುತ್ರಿಯನ್ನು ಕಳೆದುಕೊಂಡಿದ್ದೇನೆ. ಇನ್ನೂ ಹಲವಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ನಿಲಯದಿಂದ ಹೊರ ಹಾಕಲಾಗಿದೆ ಎಂದು ಮಾಧ್ಯಮಗಳಿಂದ ತಿಳಿಯಿತು. ಇದು ಸರಿಯಲ್ಲ. ಈ ಘಟನೆ ಮರುಕಳಿಸಬಾರದು. ಈ ಜನ ನೇಪಾಳಕ್ಕೆ ಹೋಗಿ, ಇಲ್ಲಿ ವ್ಯಾಸಂಗ ಮಾಡುವಂತೆ ಆಹ್ವಾನಿಸುತ್ತಾರೆ. ಸಂಸ್ಥೆಯು ಅವರನ್ನು ಅನುಚಿತವಾಗಿ ನಡೆಸಿಕೊಂಡಿದೆ” ಎಂದು ಅವರು ದೂರಿದ್ದಾರೆ.
ವಿಶೇಷ ಬಸ್ ಗಳ ಮೂಲಕ ನೇಪಾಳಿ ವಿದ್ಯಾರ್ಥಿಗಳನ್ನು ಭುವನೇಶ್ವರಕ್ಕೆ ಮರಳಿ ಕರೆ ತರಬೇಕು ಎಂದು ವಿಶ್ವವಿದ್ಯಾಲಯಕ್ಕೆ ಸರಕಾರ ಸೂಚಿಸಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಸೂರ್ಯಭಂಶಿ ಸೂರಜ್ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ನೇಪಾಳ ಪ್ರಧಾನಿ ಕೆ.ಪಿ.ಶರ್ಮ ಓಲಿ, ವಿದ್ಯಾರ್ಥಿಗಳೊಂದಿಗೆ ಆಪ್ತ ಸಮಾಲೋಚನೆ ನಡೆಸಲು ಇಬ್ಬರು ಅಧಿಕಾರಿಗಳನ್ನು ರವಾನಿಸಲಾಗಿದೆ. ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾರ್ಥಿ ನಿಲಯದಲ್ಲೇ ಉಳಿಯುವ ಅಥವಾ ಸ್ವದೇಶಕ್ಕೆ ಮರಳುವ ಎರಡು ಆಯ್ಕೆಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.