ನೂತನ ಜಗನ್ನಾಥ ಮಂದಿರ: ಹೆಸರಿನ ಕುರಿತು ಒಡಿಶಾ-ಪಶ್ಚಿಮ ಬಂಗಾಳ ನಡುವೆ ವಿವಾದ ಸೃಷ್ಟಿ
ಜಗನ್ನಾಥ ಮಂದಿರ | PC : indiatoday.in
ಹೊಸದಿಲ್ಲಿ: ದಿಘಾದ ಸಮುದ್ರ ತೀರದ ಸಮೀಪ ನೂತನ ಜಗನ್ನಾಥ ಮಂದಿರದ ಉದ್ಘಾಟನೆಯು ನೆರೆರಾಜ್ಯಗಳಾದ ಒಡಿಶಾ ಮತ್ತು ಪಶ್ಚಿಮ ಬಂಗಾಳ ನಡುವೆ ವಿವಾದವನ್ನು ಸೃಷ್ಟಿಸಿದೆ. ನೂತನ ಮಂದಿರವನ್ನು ‘ಜಗನ್ನಾಥ ಧಾಮ’ ಎಂದು ಪಶ್ಚಿಮ ಬಂಗಾಳ ಸರಕಾರವು ಉಲ್ಲೇಖಿಸಿರುವುದು ವಿವಾದದ ಕೇಂದ್ರಬಿಂದುವಾಗಿದೆ. ‘ಜಗನ್ನಾಥ ಧಾಮ’ ಪದವು ಐತಿಹಾಸಿಕವಾಗಿ ಮತ್ತು ಧರ್ಮಗ್ರಂಥಗಳಲ್ಲಿ ಹಿಂದು ಧರ್ಮದ ನಾಲ್ಕು ಮುಖ್ಯ ಯಾತ್ರಾಸ್ಥಳಗಳಲ್ಲಿ ಒಂದಾಗಿರುವ ಪುರಿಯ 12ನೇ ಶತಮಾನದ ದೇವಸ್ಥಾನಕ್ಕೆ ಮೀಸಲಾಗಿದೆ.
ನೂತನ ಮಂದಿರವನ್ನು ಜಗನ್ನಾಥ ಧಾಮ ಎಂದು ಕರೆದಿರುವುದಕ್ಕೆ ಒಡಿಶಾದ ಧಾರ್ಮಿಕ ವಿದ್ವಾಂಸರು, ಅರ್ಚಕರು ಮತ್ತು ದೇವಸ್ಥಾನದ ಸೇವಾವ್ರತಿಗಳು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ‘ಧಾಮ’ಶೀರ್ಷಿಕೆಯು ಶತಮಾನಗಳ ಸಂಪ್ರದಾಯವನ್ನು ತಿರುಚದೆ ನಕಲು ಮಾಡಲು ಅಥವಾ ಹಕ್ಕು ಪ್ರತಿಪಾದಿಸಲು ಸಾಧ್ಯವಿಲ್ಲದ ಸ್ಥಾನಮಾನ ಮತ್ತು ಪಾವಿತ್ರ್ಯವನ್ನು ಸೂಚಿಸುತ್ತದೆ ಎಂದು ಅವರು ವಾದಿಸಿದ್ದಾರೆ.
22 ಎಕರೆ ಪ್ರದೇಶದಲ್ಲಿ ಅಂದಾಜು 250 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ದಿಘಾ ಮಂದಿರವನ್ನು ಧಾರ್ಮಿಕ ಮತ್ತು ಪ್ರವಾಸಿ ತಾಣವನ್ನಾಗಿ ಬಿಂಬಿಸಲಾಗುತ್ತಿದೆ.
‘ಜಗನ್ನಾಥ ಧಾಮ ಮತ್ತು ಸಮುದ್ರವನ್ನು ನೋಡಲು ಪುರಿಗೆ ಹೋಗಬೇಕಾದ ಅಗತ್ಯವಿಲ್ಲ’ ಎಂಬಂತಹ ಘೋಷಣೆಗಳೂ ಹೊರಹೊಮ್ಮಿದ್ದು,ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಆಧುನಿಕ ವಿವಾದಕ್ಕೆ ಕಾರಣವಾದ ಐತಿಹಾಸಿಕ ಹೆಸರು:
‘ಧಾಮ’ಎನ್ನುವುದು ಹಿಂದು ದೇವತಾಶಾಸ್ತ್ರದಲ್ಲಿ ಕೇವಲ ಗೌರವಾರ್ಥ ಪದವಲ್ಲ. ಸಾಂಪ್ರದಾಯಿಕವಾಗಿ ಅದು ಹಿಂದು ಧರ್ಮದೊಂದಿಗೆ ಗುರುತಿಸಿಕೊಂಡಿರುವ ಪವಿತ್ರ ಸ್ಥಳಗಳನ್ನು ಸೂಚಿಸುತ್ತದೆ. ಎಂಟನೇ ಶತಮಾನದ ತತ್ವಜ್ಞಾನಿ ಆದಿ ಶಂಕರಾಚಾರ್ಯರು ಪುರಿ ದೇಗುಲವನ್ನು ಭಾರತದ ಚತುರ್ಧಾಮಗಳಲ್ಲಿ ಒಂದೆಂದು ಹೆಸರಿಸಿದ್ದರು. ಬದರಿನಾಥ,ದ್ವಾರಕಾ ಮತ್ತು ರಾಮೇಶ್ವರಂ ಇತರ ಮೂರು ಧಾಮಗಳಾಗಿವೆ.
ಅಂತರರಾಷ್ಟ್ರೀಯ ಖ್ಯಾತಿಯ ಮರಳು ಶಿಲ್ಪ ಕಲಾವಿದ ಹಾಗೂ ಪದ್ಮಶ್ರೀ ಪುರಸ್ಕೃತ ಒಡಿಶಾ ಮೂಲದ ಸುದರ್ಶನ ಪಟ್ನಾಯಕ್ ಅವರು ರಾಜ್ಯದ ಮುಖ್ಯಮಂತ್ರಿ ಮೋಹನ ಚರಣ ಮಾಝಿ ಅವರಿಗೆ ಪತ್ರವನ್ನು ಬರೆದು,ದಿಘಾ ಮಂದಿರವನ್ನು ‘ಜಗನ್ನಾಥ ಧಾಮ’ ಎಂದು ಕರೆಯುವುದು ಭಕ್ತರನ್ನು ದಾರಿ ತಪ್ಪಿಸುತ್ತದೆ ಮತ್ತು ಪುರಿ ಮಂದಿರದ ವಿಶಿಷ್ಟ ಅನನ್ಯತೆಯನ್ನು ಅಗೌರವಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪಶ್ಚಿಮ ಬಂಗಾಳ ಸರಕಾರದೊಂದಿಗೆ ಮಾತುಕತೆ ನಡೆಸುವಂತೆ ಅವರು ಒಡಿಶಾ ಸರಕಾರವನ್ನು ಆಗ್ರಹಿಸಿದ್ದಾರೆ.