×
Ad

ಈಶಾನ್ಯ ಭಾರತಕ್ಕಾಗಿ ನೂತನ ರಾಜಕೀಯ ವೇದಿಕೆ ಘೋಷಣೆ

Update: 2025-11-04 22:19 IST

ಹೊಸದಿಲ್ಲಿ,ನ.4: ಮೇಘಾಲಯ ಮುಖ್ಯಮಂತ್ರಿ ಕಾರ್ನಾಡ್ ಸಂಗ್ಮಾ, ಟಿಪ್ರಾ ಮೋಥಾದ ಮುಖ್ಯಸ್ಥ ಪ್ರದ್ಯೋತ ದೆಬ್ಬರ್ಮಾ,ಮಾಜಿ ಬಿಜೆಪಿ ವಕ್ತಾರ ಮೊಹೊನ್ಲುಮೊ ಕಿಕಾನ್ ಮತ್ತು ಮಾಜಿ ಕಾಂಗ್ರೆಸ್ ನಾಯಕ ಡ್ಯಾನಿಯಲ್ ಲಂಗ್ಥಾಸಾ ಅವರು ಮಂಗಳವಾರ ತಾವು ಈಶಾನ್ಯ ಭಾರತಕ್ಕಾಗಿ ನೂತನ ರಾಜಕೀಯ ವೇದಿಕೆಯನ್ನು ರಚಿಸುವುದಾಗಿ ಘೋಷಿಸಿದರು.

ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‌ಪಿಪಿ) ಮತ್ತು ಟಿಪ್ರಾ ಮೋಥಾ ಬಿಜೆಪಿಯ ಮಿತ್ರಪಕ್ಷಗಳಾಗಿವೆ. ಎನ್‌ಪಿಪಿ ಮೇಘಾಲಯದಲ್ಲಿ ಆಡಳಿತ ಪಕ್ಷವಾಗಿದ್ದು, ಟಿಪ್ರಾ ಮೋಥಾ ತ್ರಿಪುರಾದ ಸಮ್ಮಿಶ್ರ ಸರಕಾರದ ಭಾಗವಾಗಿದೆ.

ಕಿಕಾನ್ ಆಗಸ್ಟ್‌ನಲ್ಲಿ ಪಕ್ಷವನ್ನು ತೊರೆಯುವವರೆಗೆ ಈಶಾನ್ಯ ಭಾರತದಿಂದ ಬಿಜೆಪಿಯ ಏಕೈಕ ರಾಷ್ಟ್ರೀಯ ವಕ್ತಾರರಾಗಿದ್ದರು.

ಲಂಗ್ಥಾಸಾ ಸೆಪ್ಟೆಂಬರ್‌ನಲ್ಲಿ ಅಸ್ಸಾಮಿನ ನಾರ್ಥ ಕಾಚಾರ್ ಹಿಲ್ಸ್ ಸ್ವಾಯತ್ತ ಮಂಡಳಿಯ ವ್ಯಾಪ್ತಿಯಲ್ಲಿ ಪೀಪಲ್ಸ್ ಪಾರ್ಟಿಯನ್ನು ಹುಟ್ಟುಹಾಕಿದ್ದರು.

ಸುದ್ದಿಗೋಷ್ಠಿಯಲ್ಲಿ ಈ ಕ್ರಮವನ್ನು ‘ಸಾಮೂಹಿಕ ಮತ್ತು ಐತಿಹಾಸಿಕ ಘೋಷಣೆ’ ಎಂದು ಬಣ್ಣಿಸಿದ ನಾಲ್ವರು ನಾಯಕರು‘ ನಮ್ಮ ಜನರ ರಾಜಕೀಯ ಆಕಾಂಕ್ಷೆಗಳನ್ನು ನಿಜವಾಗಿಯೂ ಪ್ರತಿನಿಧಿಸುವ ಏಕೈಕ ರಾಜಕೀಯ ಸಂಘಟನೆ’ಯನ್ನು ರೂಪಿಸಲು ತಾವು ಕೈಜೋಡಿಸಿದ್ದೇವೆ ಎಂದು ಹೇಳಿದರು.

‘ನಮ್ಮ ಶಕ್ತಿ ಒಗ್ಗಟ್ಟಿನಲ್ಲಿದೆ ಎನ್ನುವುದನ್ನು ನಾವು ಅರಿತುಕೊಂಡಿದ್ದೇವೆ ಮತ್ತು ಇದು ನಮ್ಮ ಜನರಿಗೆ ಸಾಮೂಹಿಕ ಧ್ವನಿಯನ್ನು ನೀಡಲು ಸಕಾಲವಾಗಿದೆ’ ಎಂದು ಈ ನಾಯಕರು ಜಂಟಿ ಹೇಳಿಕೆಯಲ್ಲಿ ತಿಳಿಸಿದರು.

ಪ್ರಸ್ತಾವಿತ ರಾಜಕೀಯ ಸಂಘಟನೆಯ ಕಾರ್ಯವಿಧಾನಗಳು ಮತ್ತು ರಚನೆ ಸೇರಿದಂತೆ ಮುಂದಿನ ಕ್ರಮಗಳನ್ನು ಚರ್ಚಿಸಲು ಸಮಿತಿಯೊಂದನ್ನೂ ಅವರು ರಚಿಸಿದ್ದು, 45 ದಿನಗಳಲ್ಲಿ ವರದಿ ಸಲ್ಲಿಸುವಂತೆ ಅದಕ್ಕೆ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News