×
Ad

ಗುಜರಾತ್ | ಆಂಬ್ಯುಲೆನ್ಸ್‌ನಲ್ಲಿ ಅಗ್ನಿ ಅವಘಡ : ನವಜಾತ ಶಿಶು, ವೈದ್ಯ ಸೇರಿ ನಾಲ್ವರು ಮೃತ್ಯು

Update: 2025-11-18 13:19 IST

ಸಾಂದರ್ಭಿಕ ಚಿತ್ರ (AI - Grok)

ಅಹ್ಮದಾಬಾದ್ : ಗುಜರಾತ್‌ನಲ್ಲಿ ಆಂಬ್ಯುಲೆನ್ಸ್‌ವೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿ ನವಜಾತ ಶಿಶು, ವೈದ್ಯ ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.

ಗುಜರಾತ್‌ನ ಅರ್ವಳ್ಳಿ ಜಿಲ್ಲೆಯ ಮೋಡಸ ಪಟ್ಟಣದ ಬಳಿ ಮಂಗಳವಾರ ನಸುಕಿನ ಜಾವ ಆಂಬ್ಯುಲೆನ್ಸ್‌ಗೆ ಬೆಂಕಿ ಹೊತ್ತಿಕೊಂಡು ನವಜಾತ ಶಿಶು, ವೈದ್ಯ ಮತ್ತು ಇತರ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಸಾಗರ್ ಜಿಲ್ಲೆಯ ನಿವಾಸಿ ಜಿಗ್ನೇಶ್ ಮೋಚಿ ತನ್ನ ಪತ್ನಿಯ ಹೆರಿಗೆಯ ನಂತರ ಅಸ್ವಸ್ಥವಾಗಿದ್ದ ಒಂದು ದಿನದ ಪುಟ್ಟ ಮಗುವನ್ನು ಮೋಡಸ ಬಳಿಯ ಆಸ್ಪತ್ರೆಯಿಂದ ಅಹ್ಮದಾಬಾದ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮುಂಜಾನೆ 1 ಗಂಟೆ ಸುಮಾರಿಗೆ ಮೋಡಸ-ಧನ್ಸುರ ರಸ್ತೆಯಲ್ಲಿ ಆಂಬ್ಯುಲೆನ್ಸ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್‌ ಡಿಬಿ ವಾಲಾ ತಿಳಿಸಿದ್ದಾರೆ.

ಮಗು, ತಂದೆ ಜಿಗ್ನೇಶ್ ಮೋಚಿ (38), ವೈದ್ಯ ಶಾಂತಿಲಾಲ್ ರೆಂಟಿಯಾ (30) ಮತ್ತು ನರ್ಸ್ ಭೂರಿಬೆನ್ ಮನಾತ್ (23) ಘಟನೆಯಲ್ಲಿ ಮೃತಪಟ್ಟಿದ್ದಾರೆ. ಜಿಗ್ನೇಶ್ ಮೋಚಿಯ ಇಬ್ಬರು ಸಂಬಂಧಿಕರು, ಆಂಬ್ಯುಲೆನ್ಸ್ ಚಾಲಕ ಸೇರಿದಂತೆ ಮೂವರಿಗೆ ಸುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಘಟನೆ ಕುರಿತು ತನಿಖೆ ನಡೆಯುತ್ತಿದೆ ಮತ್ತು ದುರಂತಕ್ಕೆ ಕಾರಣಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಹರಸಿನ್ಹ ಜಡೇಜಾ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News