ಹೆಡ್ ಲೈನ್ ನೀಡಿತು, ಡೆಡ್ ಲೈನ್ ಯಾವಾಗ?: ಕೇಂದ್ರ ಸರಕಾರದ ಜಾತಿ ಗಣತಿ ಕುರಿತು ಕಾಂಗ್ರೆಸ್ ಪ್ರಶ್ನೆ
ಜೈರಾಂ ರಮೇಶ್ | PTI file Photo
ಹೊಸದಿಲ್ಲಿ: ಇಡೀ ದೇಶ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರು ಹಾಗೂ ಅವರ ಕುಟುಂಬಗಳಿಗಾಗಿ ಕಂಬನಿ ಮಿಡಿಯುತ್ತಾ, ಅವರಿಗಾಗಿ ನ್ಯಾಯವನ್ನು ನಿರೀಕ್ಷಿಸುತ್ತಿರುವಾಗಲೇ ಜಾತಿಗಣತಿ ಪ್ರಕ್ರಿಯೆಯನ್ನು ಪ್ರಕಟಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, "ಇದು ಕಾಲಮಿತಿಯಿಲ್ಲದೆ ಹೆಡ್ ಲೈನ್(ಸುದ್ದಿ) ನೀಡಿರುವ ಬುದ್ಧಿವಂತಿಕೆಯಾಗಿದೆ" ಎಂದು ವ್ಯಂಗ್ಯವಾಡಿದೆ.
ಜಾತಿ ಗಣತಿ ಪ್ರಕಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಇಬ್ಬರನ್ನೂ ವ್ಯಂಗ್ಯವಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಕೂಡಾ, "ನೀವೇನಾದರೂ ನಗರ ನಕ್ಸಲರಾಗಿಬಿಟ್ಟಿರಾ?" ಎಂದು ಛೇಡಿಸಿದರು. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ, "ಜಾತಿ ಗಣತಿ ಪರ ವಾದಿಸುವುದು ನಗರ ನಕ್ಸಲರ ಚಿಂತನೆ" ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ, ಅವರು ಮೇಲಿನಂತೆ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಮೊದಲ ಹೆಜ್ಜೆಯಾಗಿದ್ದು, ಕಾಂಗ್ರೆಸ್ ಪಕ್ಷದ ಎರಡನೆ ಮತ್ತು ಮೂರನೆ ಹೆಜ್ಜೆಯಲ್ಲಿ ಶೇ. 50ರ ಮೀಸಲಾತಿ ಮಿತಿಯನ್ನು ತೆಗೆದು ಹಾಕಬೇಕು ಸಂವಿಧಾನದ ವಿಧಿ 15 (5)ರಡಿ ಖಾತರಿಪಡಿಸಿರುವಂತೆ ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಗುತ್ತದೆ. ಆದರೆ, ಇವನ್ನು ಮಾಡಲಾಗುತ್ತದೆಯೆ ಎಂಬುದರ ಕುರಿತು ಕೇಂದ್ರ ಸರಕಾರ ಮೌನ ತಾಳಿದೆ ಎಂದು ಟೀಕಿಸಿದರು.
"ಈ ಪ್ರಕಟಣೆಯೊಂದಿಗೆ, ಕಾಲಮಿತಿಯಿಲ್ಲದೆ ತಲೆಬರಹ ನೀಡಲಾಗಿದೆ. ಕಾಲಮಿತಿಯಿಲ್ಲದೆ ತಲೆಬರಹ ನೀಡುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿದ್ಧಹಸ್ತರಾಗಿದ್ದಾರೆ. ಹೀಗಾಗಿಯೇ, ಈ ಕುರಿತ ನೀಲನಕ್ಷೆಗಾಗಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಗ್ರಹಿಸಿರುವುದು. ಈ ಪ್ರಕಟಣೆಯ ಉದ್ದೇಶ ಕೇವಲ ತಲೆಬರಹದ ನಿರ್ವಹಣೆಯಾಗಿದೆ" ಎಂದು ಅವರು ಟೀಕಾಪ್ರಹಾರ ನಡೆಸಿದರು.